
ವಕೀಲರು ವೃತ್ತಿಪರತೆಯೊಂದಿಗೆ ಮುನ್ನಡೆಯುವುದು ಅಗತ್ಯ: ನ್ಯಾಯಮೂರ್ತಿ ಸಿ.ಎಂ. ಜೋಶಿ
ಮಂಗಳೂರು: ವಕೀಲರಿಗೆ ಕೇಸ್ಗಳಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ವೃತ್ತಿಪರತೆಯೊಂದಿಗೆ ಮುನ್ನಡೆಯುವುದು ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಸಿ.ಎಂ. ಜೋಶಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಆರಂಭಿಸಬೇಕು ಎನ್ನುವ ಹಕ್ಕೊತ್ತಾಯದೊಂದಿಗೆ ಮಂಗಳೂರಿನ ನೆಹರೂ ಮೈದಾನದ ಜಸ್ಟೀಸ್ ಕೆ.ಎಸ್. ಹೆಗ್ಡೆ ಪೆವಿಲಿಯನ್ನಲ್ಲಿ ಮಂಗಳೂರು ವಕೀಲರ ಸಂಘದಿಂದ ಆಯೋಜಿಸಲಾಗಿರುವ ಮೂರು ದಿನಗಳ ರಾಜ್ಯಮಟ್ಟದ ‘ಅಡ್ವೊಕೇಟ್ಸ್ ಕಪ್ -2024 ವಕೀಲರ ಕ್ರಿಕೆಟ್ ಮತ್ತು ಥ್ರೋಬಾಲ್’ ಪಂದ್ಯಾವಳಿಯ ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಕೀಲರಿಗೆ ಕ್ರೀಡಾಮನೋಭಾವ ಮೂಲಭೂತವಾಗಿ ಸೇರಿಕೊಂಡಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಲು ಕ್ರೀಡೋತ್ಸವಗಳು ವೇದಿಕೆಯಾಗಿವೆ. ಮಂಗಳೂರು ವಕೀಲರ ಸಂಘ ಅದನ್ನು ಸಾಧಿಸಿದೆ ಎಂದರು.
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ.ಎಸ್. ವಿಶ್ವಜಿತ್ ಶೆಟ್ಟಿ ಮಾತನಾಡಿ, ವಕೀಲರದ್ದು ವಾರವಿಡೀ ಕೆಲಸ ಮಾಡುವ ವೃತ್ತಿಯಾಗಿದೆ. ಆ ಕಾರಣದಿಂದ ಆರೋಗ್ಯ ಮುಖ್ಯವಾಗಿದ್ದು, ಕ್ರೀಡಾಕೂಟಗಳು ಇದಕ್ಕೆ ನೆರವಾಗಲಿದೆ. ಸೌಹಾರ್ದತೆಗಾಗಿ ಕ್ರೀಡೋತ್ಸವ ಉತ್ತಮ ಪರಿಕಲ್ಪನೆಯಾಗಿದೆ. ನ್ಯಾಯಾಧೀಶರು, ವಕೀಲರು ಆರೋಗ್ಯದತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂದರು.
ಕರ್ನಾಟಕ ಸರಕಾರದ ಅಡ್ವಕೇಟ್ ಜನರಲ್ ಶಶಿಕಿರಣ್ ಎಸ್. ಶೆಟ್ಟಿ ಮಾತನಾಡಿ, ವಕೀಲರು ಯಾವುದೇ ವಾದ ಮಾಡದೆ ಒಂದೆಡೆ ಸೇರಲು ಕ್ರೀಡಾಕೂಟ ವೇದಿಕೆಯಾಗಿದೆ. ಕ್ರೀಡಾಕೂಟಗಳು ಎಲ್ಲಾ ವಕೀಲರನ್ನು ಒಟ್ಟುಗೂಡಿಸುವ ಜತೆಗೆ ಮಾನ ಸಿಕ ಹಾಗೂ ದೈಹಿಕ ಸದೃಢತೆ ಒದಗಿಸುತ್ತದೆ ಎಂದರು.
ಹೈಕೋರ್ಟ್ನ ಹಿರಿಯ ವಕೀಲ ಪಿ.ಪಿ. ಹೆಗಡೆ ಮಾತನಾಡಿ, ಮಂಗಳೂರು ವಕೀಲರ ಸಂಘದ ಚರಿತ್ರೆಯಲ್ಲಿ ಇಂತಹ ಕ್ರೀಡಾಕೂಟ ಆಯೋಜನೆ ಗಮನಾರ್ಹವಾಗಿದ್ದು, ಇಲ್ಲಿನ ವಕೀಲರ ಸಂಘಟನಾತ್ಮಕತೆ ರಾಜ್ಯಕ್ಕೆ ಮಾದರಿ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ, ಸುಪ್ರೀಂಕೋರ್ಟ್ ವಕೀಲ ರೋಹಿತ್ ರಾವ್ ಎನ್., ಹೈಕೋರ್ಟ್ನ ವಕೀಲ ಕಮಲುದ್ದೀನ್ ಅಹಮ್ಮದ್, ಮಂಗಳೂರು ವಕೀಲ ಸಂಘದ ಮಾಜಿ ಅಧ್ಯಕ್ಷ ಎನ್.ಎನ್. ಹೆಗ್ಡೆ ಶುಭಹಾರೈಸಿದರು.
ದ.ಕ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್. ವಿ. ರಾಘವೇಂದ್ರ, ಉಪಾಧ್ಯಕ್ಷ ಸುಜಿತ್ ಕುಮಾರ್, ಪ್ರಮುಖರಾದ ಶ್ರೀಧರ್ ಎಚ್., ಗಿರೀಶ್ ಶೆಟ್ಟಿ ಎ., ಜ್ಯೋತಿ, ಬಿ. ಜಿನೇಂದ್ರ ಕುಮಾರ್, ಕೆ. ಪೃಥ್ವಿರಾಜ್ ರೈ, ಪ್ರವೀಣ್ ಕುಮಾರ್ ಅದ್ಯಪಾಡಿ, ಶ್ರೀಧರ ಎಣ್ಮಕಜೆ, ಪಿ.ಬಿ. ರೈ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಅಶೋಕ್ ಅರಿಗಾ ಸ್ವಾಗತಿಸಿದರು. ಆಶಾ ನಾಯಕ್ ವಂದಿಸಿದರು.