ಅಳಕೆ ಮಾರುಕಟ್ಟೆ ಪ್ರದೇಶಕ್ಕೆ ಮೇಯರ್ ಭೇಟಿ
ಮಂಗಳೂರು: ಕಳೆದ ನಾಲ್ಕು ವರ್ಷಗಳ ಹಿಂದೆ ಉದ್ಘಾಟನೆಗೊಂಡ ಅಳಕೆ ಮಾರುಕಟ್ಟೆ ಉಪಯೋಗಕ್ಕೆ ಬಾರದೇ ಇದ್ದು, ಶುಕ್ರವಾರ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅವರು ಅಲ್ಲಿಗೆ ತೆರಳಿ ಸಮಸ್ಯೆಯನ್ನು ಆಲಿಸಿದರು.
ಇಲ್ಲಿನ 25 ಅಂಗಡಿಗಳಲ್ಲಿ ಕೇವಲ 4 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಟೆಂಡರ್ ಮೂಲಕ ಖಾಸಗಿ ವ್ಯಕ್ತಿಯೊಬ್ಬರಿಗೆ ಮಾರುಕಟ್ಟೆ ನೀಡಿ ಹೂವು ಮತ್ತು ತರಕಾರಿ ಮಾರುಕಟ್ಟೆಯಾಗಿ ಪರಿವರ್ತಿಸಿ ಅಭಿವೃದ್ದಿಪಡಿಸಲು ಚಿಂತನೆ ನಡೆಸಿದ್ದೇವೆ. ಮಾಂಸ ವ್ಯಾಪಾರಸ್ಥರಿಗೆ ಹೊರಗಿನ ಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಮಾಂಸದ ಅಂಗಡಿಗಳು ಶಿಫ್ಟ್ ಆದ ಬಳಿ ಸಂಪೂರ್ಣ ಮಾರುಕಟ್ಟೆಯನ್ನು ಹೂವು ಮತ್ತು ತರಕಾರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಾಗುವುದು. ಮಾರುಕಟ್ಟೆಯ ಮುಂಭಾಗದಲ್ಲಿ ಟೆಂಪೋಗಳನ್ನು ಪಾರ್ಕ್ ಮಾಡಲಾಗುತ್ತಿದ್ದು ಅವರಿಗೆ ಬೇರೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗುವುದು. ಇದೇ ಜಾಗದಲ್ಲಿ ಮುಂದಿನ ದಿನಗಳಲ್ಲಿ ವಾರದ ಸಂತೆಗೂ ಅವಕಾಶ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭ ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯ ಮನೋಹರ್ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.