
ಸೈಬರ್ ಅಪರಾಧ ಬಗ್ಗೆ ಯುವ ಜನತೆಗೆ ಜಾಗೃತಿ
Wednesday, December 4, 2024
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಸೈಬರ್ ಅಪರಾಧಗಳ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಬೇಕು ಎಂದು ‘ಸಿಂಡ್ಸ್’ ಸಂಸ್ಥೆಯ ಕಾರ್ಯದರ್ಶಿ ಹರೀಶ್ ಎ. ಹೇಳಿದರು.
‘ಸೈಬರ್ ಅಪರಾಧಗಳು ಮತ್ತು ಸೈಬರ್ ಭದ್ರತೆಯಲ್ಲಿ ಯುವಕರ ದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರು ಉಪನ್ಯಾಸ ನೀಡಿದರು.
ಪ್ರಸ್ತುತ ಸಮಾಜದಲ್ಲಿ ಮೊಬೈಲ್ನ ವಿವೇಚನಾಯುಕ್ತ ಬಳಕೆ ಮತ್ತು ವಿವಿಧ ಬಗೆಯ ಸೈಬರ್ ಅಪರಾಧಗಳ ಬಗ್ಗೆ ವಿದ್ಯಾರ್ಥಿಗಳಿಗೆ ದೃಷ್ಟಾಂತಗಳ ಮೂಲಕ ವಿವರಿಸಿದರು.
ಪಿಪಿಟಿಯ ಮುಖಾಂತರ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ .ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಕುಮಾರೇಶ್ವರ ಭಟ್ ಮುಂಡಾಜೆ, ಐಕ್ಯೂಎಸಿ ಸಂಚಾಲಕಿ ಮಾಳವಿಕ ಉಪಸ್ಥಿತರಿದ್ದರು. ಗ್ರಂಥಪಾಲಕ ನಿರಂಜನ್ ಸ್ವಾಗತಿಸಿದರು. ಸಮಾಜಕಾರ್ಯ ಅಂತಿಮ ಪದವಿಯ ಸಂತೋಷ್ ವಂದಿಸಿದರು. ವಿದ್ಯಾರ್ಥಿನಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.