ಅಡಕೆ ಕ್ಯಾನ್ಸರ್‌ಕಾರಕ ಎಂಬ ಡಬ್ಲ್ಯೂಎಚ್‌ಒ ವರದಿ: ಅಡಕೆಯ ಆರೋಗ್ಯ ಪರಿಣಾಮಗಳ ಕುರಿತು ಅಧ್ಯಯನಕ್ಕೆ ಮುಂದಾದ ಕೇಂದ್ರ ಸರ್ಕಾರ

ಅಡಕೆ ಕ್ಯಾನ್ಸರ್‌ಕಾರಕ ಎಂಬ ಡಬ್ಲ್ಯೂಎಚ್‌ಒ ವರದಿ: ಅಡಕೆಯ ಆರೋಗ್ಯ ಪರಿಣಾಮಗಳ ಕುರಿತು ಅಧ್ಯಯನಕ್ಕೆ ಮುಂದಾದ ಕೇಂದ್ರ ಸರ್ಕಾರ

ಮಂಗಳೂರು: ಅಡಕೆ ಕ್ಯಾನ್ಸರ್‌ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಅಧ್ಯಯನ ವರದಿ ಪುನರುಚ್ಚರಿಸಿರುವುದು ವಿವಾದಕ್ಕೆ ಒಳಗಾದ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರ ಅಡಕೆಯ ಆರೋಗ್ಯ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಭಗೀರಥ ಚೌಧರಿ ಅವರು ಮಂಗಳವಾರ ಲೋಕಸಭೆಯಲ್ಲಿ ಕಾಸರಗೋಡು ಸಂಸದ ರಾಜಮೋಹನ್  ಉಣ್ಣಿತ್ತಾನ್ ಅವರಿಗೆ ಲಿಖಿತ ಉತ್ತರ ನೀಡಿದ್ದಾರೆ.

ಅಡಕೆಯ ಕುರಿತು ವೈಜ್ಞಾನಿಕ ಸಂಶೋಧನೆ ಮತ್ತು ಮಾನವ ಆರೋಗ್ಯ ಎಂಬ ಶೀರ್ಷಿಕೆಯಡಿ ಅಧ್ಯಯನ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಡಕೆಯ ಔಷಧೀಯ  ಗುಣಗಳ ಬಗ್ಗೆ ಸಂಶೋಧನೆ ನಡೆಸಲು ಕೇಂದ್ರ ಸರ್ಕಾರ ಆಸಕ್ತಿ ಹೊಂದಿದೆ. ಈ ಅಧ್ಯಯನ ಸಮಾರು 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ  ನಡೆಸಲಾಗುತ್ತದೆ. ಆಲ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್(ಎಐಐಎಂಎಸ್) ಸೇರಿದಂತೆ ವೈದ್ಯಕೀಯ ಸಂಶೋಧನೆ ಜೊತೆಗೆ ಇತರೆ ಸಂಸ್ಥೆಗಳೂ  ಅಡಕೆಯ ಪರಿಣಾಮದ ಬಗ್ಗೆ ಸಮಗ್ರ ಸಂಶೋಧನೆ ನಡೆಸಲಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.

ಅಡಕೆ ಬೆಳೆಗಾರರು ಈಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರಕ್ಕೆ ಅರಿವು ಇದೆ ಎಂದು ಹೇಳಿರುವ ಸಚಿವರು, ಅಡಕೆ ಆರೋಗ್ಯದ ಪರಿಣಾಮ ಕುರಿತ ವಿಶ್ವ  ಆರೋಗ್ಯ ಸಂಸ್ಥೆ ಉಲ್ಲೇಖಿಸಿರುವ ಕೆಲವು ಸಂಶೋಧನಾ ಪ್ರಬಂಧಗಳು ಮಿತಿಯನ್ನು ಹೊಂದಿವೆ. ಹೀಗಾಗಿ ಆಗಾಗ ಕೆಲವು ವಿರೋಧವಾದ ವರದಿಗಳು ಪ್ರಕಟವಾಗುತ್ತಿವೆ.  ಹೀಗಾಗಿ ಮತ್ತೊಮ್ಮೆ ಪ್ರತ್ಯೇಕ ಅಧ್ಯಯನ ನಡೆಯಲಿದೆ ಎಂದು ತಿಳಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಹೆಚ್ಚಿನ ವರದಿಗಳಲ್ಲಿ ಹುಡಿ ಅಡಕೆ(ಕ್ವಿಡ್) ಮತ್ತು ಗುಟ್ಕಾದಂತಹ ಮಿಶ್ರಣಗಳಿಂದ ಆರೋಗ್ಯದ ಮೇಲಿನ ಪರಿಣಾಮಗಳನ್ನು ಉಲ್ಲೇಖಿಸಿದೆ.  ಅದರಲ್ಲಿ ಇತರೆ ಪದಾರ್ಥಗಳ ಜೊತೆ ಅಡಕೆಯನ್ನು ಹೆಸರಿಸಲಾಗಿದೆ. ಅಡಕೆ ಪ್ರತ್ಯೇಕ ಸೇವನೆಯಿಂದ ಮಾನವನ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ವರದಿಯಲ್ಲಿ  ಉಲ್ಲೇಖಿಸಿಲ್ಲ. ಹೀಗಾಗಿ ಅದಕ್ಕಾಗಿಯೇ ಪ್ರತ್ಯೇಕ ಅಧ್ಯಯನ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

2023ರ ನವೆಂಬರ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್), ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಕೈಗೊಂಡಿರುವ ಅಧ್ಯಯನದ ಪ್ರಕಾರ, ಅಡಕೆಯಲ್ಲಿ ಅರೆಕೋಲಿನ್ ಅಂಶ ಇರುವುದನ್ನು ವರದಿಗಳು ಬಹಿರಂಗಪಡಿಸಿವೆ. ಈ ಪ್ರಯೋಗದಲ್ಲಿ ಬಳಸಲಾದ  ಅರೆಕೋಲಿನ್ ಅಂಶದ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಆದರೆ ಕಡಿಮೆ ಪ್ರಮಾಣದಲ್ಲಿ ಅರೆಕೋಲಿನ್ ಬಳಕೆ ಮಾಡಿದರೆ ಹಾ ನಿಕಾರದ ಅಂಶವನ್ನು ತಡೆಯುತ್ತದೆ ಎಂಬ ವರದಿ ಇದೆ ಎಂದು ಸಿಪಿಸಿಆರ್‌ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿನ ಎಲ್ಲ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಡಕೆ ಪ್ರಮುಖ ಸ್ಥಾನ ಪಡೆದಿದೆ. ಆಯುರ್ವೇದದಲ್ಲೂ ಅಡಕೆಯ ಔಷಧ  ಬಳಕೆಯಾಗುತ್ತದೆ. ಜೊತೆಗೆ ಅಡಕೆಯನ್ನು ವೀಳ್ಯದಲೆಯಲ್ಲಿ ಬಳಸಲಾಗುತ್ತದೆ. ಸಾಂಪ್ರದಾಯಿಕ ಆಹಾರದ ನಂತರ ತಾಂಬೂಲ ಎಂದು ಅಡಕೆಯನ್ನು ಬಳಸುತ್ತಾರೆ  ಎಂದು ಸಚಿವಾಲಯದ ವರದಿಯಲ್ಲಿ ಹೇಳಲಾಗಿದೆ.

ಅಡಕೆಯನ್ನು ಕ್ಯಾನ್ಸರ್‌ಕಾರಕ ಪಟ್ಟಿಯಿಂದ ಹೊರತರಲು ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಈಗಾಗಲೇ ಸಂಬಂಧಿತ ಸಚಿವರು, ಸಂಸದರಿಗೆ  ಪತ್ರ ಬರೆದು ಈ ಬಗ್ಗೆ ಸಂಶೋಧನೆಗೆ ಒತ್ತಾಯಿಸಿದೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ. ಅಡಕೆ ಕ್ಯಾನ್ಸರ್ ನಿವಾರಕ ಎಂಬ  ಬಗ್ಗೆ ಕೃಷಿಮಾರುಕಟ್ಟೆ ತಜ್ಞರು, ಆರ್ಥಿಕ ತಜ್ಞರ ಬರಹಗಳು ಕೂಡ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿರುವುದು ಉಲ್ಲೇಖನೀಯ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article