
ಸಿಪಿಐಎಂನ ಹಿರಿಯ ಸದಸ್ಯ ಕಾಂ. ಲಿಂಗಪ್ಪ ಚೌಟ ನಿಧನ
ಮಂಗಳೂರು: ಸಿಪಿಐಎಂನ ಹಿರಿಯ ಸದಸ್ಯರೂ, ತನ್ನ ಕೊನೆಯ ಕಾಲಾವಧಿವರೆಗೂ ಕಮ್ಯೂನಿಷ್ಟ್ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದ ಕಾಂ. ಲಿಂಗಪ್ಪ ಚೌಟ ಬಜಾಲ್ (85) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬಜಾಲ್ ಪ್ರದೇಶದ ಜಲ್ಲಿಗುಡ್ಡೆಯಲ್ಲಿ ಹುಟ್ಟಿ ಬೆಳೆದಿರುವ ಲಿಂಗಪ್ಪ ಚೌಟ ಅವರು, ಎಳೆಯ ಪ್ರಾಯದಲ್ಲೇ ತಮ್ಮ ಕಣ್ಣೆದುರು ನಡೆಯುತ್ತಿದ್ದ ನೇಯ್ಗೆ, ಹಂಚು, ಬೀಡಿ ಮತ್ತು ರೈತ ಕಾರ್ಮಿಕರ ಹೋರಾಟಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾಗಿದ್ದರು.
ಬಳಿಕ ಹಂಚು ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ವೇಳೆ ಸಂಪೂರ್ಣ ಕಮ್ಯುನಿಸ್ಟ್ ಕಾರ್ಯಕರ್ತರಾಗಿ ಬೆಳೆದರು. ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳಲ್ಲಿ ದುಡಿದಿರುವ ಲಿಂಗಪ್ಪ ಚೌಟ ಅವರು ದುಡಿಯುವ ವರ್ಗದ ಚಳುವಳಿ ಹೋರಾಟಗಳು ಎಲ್ಲೇ ನಡೆಯಲಿ, ಅಲ್ಲಿ ಭಾಗವಹಿಸುತ್ತಾ ಇತರ ಸಂಗಾತಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು. ಒಟ್ಟಿನಲ್ಲಿ ಕಾಂ. ಲಿಂಗಪ್ಪ ಚೌಟ ಅವರ ಅಗಲುವಿಕೆಯು ಕಮ್ಯುನಿಸ್ಟ್ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ತಮ್ಮ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಪುತ್ರಿಯರು, ಮೊಮ್ಮಕ್ಕಳು ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.