
ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಯು.ಟಿ. ಖಾದರ್ ಉಪನ್ಯಾಸ
ಮಂಗಳೂರು: ಧಾರ್ಮಿಕ ನಂಬಿಕೆಗಳು ಸ್ಪರ್ಧೆಯ ವಿಷಯವಲ್ಲ. ಅವು ಸಹಯೋಗ ಮತ್ತು ಸತ್ಯದ ಕಡೆಗೆ ನಂಬಿಕೆಯ ಪಯಣವಾಗಿದೆ. ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ. ಅದು ಭೂಮಿಯ ಮೇಲಿನ ಸೌಹಾರ್ದತೆಯ ಪ್ರಬಲ ಶಕ್ತಿಯಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ರೋಮ್‌ನ ವ್ಯಾಟಿಕನ್ ನಗರದಲ್ಲಿ ನಡೆದ ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ‘ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು’ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಆಧ್ಯಾತ್ಮಿಕ ದಾರ್ಶನಿಕರ ಪುಣ್ಯಭೂಮಿ ಭಾರತದಿಂದ ಬಂದಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. 1924ರಲ್ಲಿ ಭಾರತದ ಕೇರಳ ರಾಜ್ಯದ ಆಲುವಾದ ಅದ್ವೈತ ಆಶ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಆಯೋಜಿಸಿದ್ದ ಮೊದಲ ವಿಶ್ವ ಸರ್ವ ಧರ್ಮ ಸಮ್ಮೇಳನದ ಶತಮಾನೋತ್ಸವದ ಸ್ಮರಣಾರ್ಥ ನಡೆಸುತ್ತಿರುವ ಈ ಐತಿಹಾಸಿಕ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಲು ನನಗೆ ಅವಕಾಶ ದೊರಕಿರುವುದು ಗೌರವ ಮತ್ತು ಸಂತೋಷದ ವಿಷಯವಾಗಿದೆ.
ಸಮಾಜದಲ್ಲಿ ತಾರತಮ್ಯ ಮತ್ತು ವಿಭಜನೆ ಅತಿ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ಸುಧಾರಣೆಗಳು ಜನರ ಬದುಕಿಗೆ ಸಾಂತ್ವನದ ಬೆಳಕು ನೀಡುವ ದಾರಿದೀಪವಾಗಿ ಪರಿಣಮಿಸಿತ್ತು.ನಮ್ಮ ಧರ್ಮ ವೇದಿಕೆಗಳು ಭಯ ಹುಟ್ಟಿಸುವುದಕ್ಕಿಂತ, ಜನರಲ್ಲಿ ಭರವಸೆ ಮತ್ತು ಪ್ರೀತಿ ಮೂಡಿಸಲು ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳಿಗೆ ಸರ್ವಧರ್ಮ ಶಿಕ್ಷಣವನ್ನು ನೀಡುವುದು ಅತ್ಯವಶ್ಯಕ. ಪರಿಶುದ್ಧ ಮನಸ್ಸಿನಲ್ಲಿ ಅವರ ಧಾರ್ಮಿಕ ನಂಬಿಕೆಗಳ ಇತಿಹಾಸದ ಜತೆಗೆ, ಇತರ ಧರ್ಮಗಳ ತತ್ವಗಳ ಸೌಂದರ್ಯವನ್ನೂ ಪರಿಚಯಿಸೋಣ ಎಂದು ಯು.ಟಿ. ಖಾದರ್ ಹೇಳಿದರು.