
ನಿಷ್ಕಾಮ ಸೇವೆಯಿಂದಲೇ ಸಾರ್ಥಕತೆ ದೊರಕುತ್ತದೆ: ಡಾ. ಚೂಂತಾರು
Wednesday, December 25, 2024
ಮೂಡುಬಿದಿರೆ: ಗೃಹರಕ್ಷಕ ದಳದ ಧ್ಯೇಯ ವಾಕ್ಯವಾದ ‘ನಿಷ್ಕಾಮ ಸೇವೆ ಸೇವೆಯೇ ಪರಮಗುರಿ’ ಎಂಬ ಮಾತನ್ನು ಚಾಚೂ ತಪ್ಪದೇ ಪಾಲಿಸಿ ಸುಮಾರು 35 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿ ಹೊಂದಿರುವ ಪಾಂಡಿರಾಜ್ ಅವರ ಸೇವೆ ನಿಜಕ್ಕೂ ಶ್ಲಾಘನೀಯ ನಿಷ್ಕಾಮ ಸೇವೆಯಿಂದ ಸಿಗುವ ಸಾರ್ಥಕತೆ ಇನ್ನಾವ ಸೇವೆಯಿಂದಲೂ ಸಿಗಲು ಸಾಧ್ಯವಿಲ್ಲ ಎಂದು ದ.ಕ. ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಹೇಳಿದರು.
ಅವರು ಮೂಡುಬಿದಿರೆ ಪ್ರಾಂತ್ಯ ಶಾಲೆಯಲ್ಲಿ ಮೂಡುಬಿದಿರೆ ಘಟಕದ ಪ್ರಭಾರ ಘಟಕಾಧಿಕಾರಿ ಪಾಂಡಿರಾಜ್ ಕೆ. ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸದಾ ಎಲೆಮರೆಯ ಕಾಯಿಯಂತೆ ದೇಶ ಕಾಯುವ ಮತ್ತು ದೇಶ ಕಟ್ಟುವ ಕಾಯಕ ಮಾಡುವ ಗೃಹರಕ್ಷಕರ ಸೇವೆ ನಿಜಕ್ಕೂ ಅಭಿನಂದನೀಯ. ಈ ಹಿನ್ನೆಲೆಯಲ್ಲಿ ಪಾಂಡಿರಾಜ್ ಅವರ ಮೂವತ್ತು ವರ್ಷಗಳ ಸಾರ್ಥಕ ಸೇವೆಯನ್ನು ಗೃಹರಕ್ಷಕ ಇಲಾಖೆ ಸದಾ ಸ್ಮರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ., ಮಾಜಿ ಘಟಕಾಧಿಕಾರಿ ದಯಾನಂದ ಪೈ, ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ಸಾಲ್ಯಾನ್, ಪತ್ರಕರ್ತರ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ, ನೂತನ ಘಟಕಾಧಿಕಾರಿ ಚಂದ್ರಶೇಖರ್, ಕಛೇರಿ ಸಿಬ್ಬಂದಿ ಶ್ಯಾಮಲಾ ಎ., ಸುಲೋಚನಾ, ಖತೀಜಮ್ಮ, ಸಂಜಯ್ ಹಾಗೂ ಮೂಡುಬಿದಿರೆ ಘಟಕದ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.