
ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ 30 ವರ್ಷಗಳ ದೂರದೃಷ್ಟಿಯ ಯೋಜನೆ: ಯು.ಟಿ. ಖಾದರ್
ಉಳ್ಳಾಲ: ಯಾವುದೇ ಜಿಲ್ಲೆ ಅಥವಾ ರಾಜ್ಯದವರು ದೇಶದ ಯಾವುದೇ ಭಾಗದಲ್ಲೂ ವ್ಯವಹಾರ ನಡೆಸಲು ಬಂಡವಾಳ ಹಾಕಬೇಕಾದ ಸಂದರ್ಭದಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆ ಬಗ್ಗೆ ಯೋಚಿಸುತ್ತಾರೆ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ 30 ವರ್ಷಗಳ ದೂರದೃಷ್ಟಿಯ ಯೋಜನೆ ತರಲಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಮೆಸ್ಕಾಂ ವತಿಯಿಂದ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಕೋಟೆಕಾರುವಿನಲ್ಲಿ ನಿರ್ಮಾಣಗೊಂಡಿರುವ 33ಕೆವಿ 8 ಯ.ವಿ.ಎ ಸಾಮರ್ಥ್ಯದ ಉಪಕೇಂದ್ರಕ್ಕೆ ಮಂಗಳವಾರದಂದು ಪರೀಕ್ಷಾರ್ಥ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಕ್ಕೆ ಉಳ್ಳಾಲ ನಗರ, ಕೋಟೆಕಾರ್, ಕೊಣಾಜೆ, ಬೆಲ್ಮ, ಬೋಳಿಯಾರ್, ಕಿನ್ಯದಲ್ಲಿ ಸೆಕ್ಷನ್ ಕಚೇರಿ ನಿರ್ಮಾಣದ ಜೊತೆಗೆ ವಿದ್ಯುತ್ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ಆಗಲಿದೆ. ಇದರಿಂದಾಗಿ ಉಳ್ಳಾಲ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಪ್ರಸ್ತುತ ಕಿನ್ಯಾ, ತಲಪಾಡಿ ಮತ್ತು ಮಾಡೂರು ಪ್ರದೇಶಗಳಿಗೆ 110ಕೆವಿ ವಿದ್ಯುತ್ ಕೊಣಾಜೆ ಉಪಕೇಂದ್ರದಿಂದ ಮತ್ತು ಕೋಟೆಕಾರ್,ಸೋಮೇಶ್ವರ ಪುದೇಶಗಳಿಗೆ 33 ಕೆವಿ ವಿದ್ಯುತ್ ತೊಕ್ಕೊಟ್ಟು ಉಪಕೇಂದ್ರದಿಂದ ಸರಬರಾಜು ಮಾಡಲಾಗುತ್ತಿದೆ. ಉಪಕೇಂದ್ರಗಳ ಮತ್ತು ವಿದ್ಯುತ್ ಮಾರ್ಗಗಳ ಓವರ್ ಲೋಡ್‌ನಿಂದಾಗಿ ಕೆಲವು ಸಂದರ್ಭಗಳಲ್ಲಿ ವಿದ್ಯುತ್ ಕಡಿತ ಉಂಟಾಗುತ್ತಿದ್ದು ಕೋಟೆಕಾರ್ ಉಪಕೇಂದ್ರ ಕಾರ್ಯಾರಂಭಗೊಂಡರೆ ಕಿನ್ಯಾ, ತಲಪಾಡಿ, ಕೋಟೆಕಾರ್ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಮಂಗಳೂರು ಮೆಸ್ಕಾಂ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್., ನಿರ್ದೇಶಕ ಕೆ.ಎಂ.ಮಹಾದೇವ ಸ್ವಾಮಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಕೋಟೆಕಾರ್ ಪ.ಪಂ. ಅಧ್ಯಕ್ಷೆ ದಿವ್ಯಾ ಎಸ್. ಶೆಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸುಳ್ಳೆಂಜೀರ್, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಮೆಸ್ಕಾಂ ಆರ್ಥಿಕ ಅಧಿಕಾರಿ ಹರಿಶ್ಚಂದ್ರ ಬೋರ್ಕರ್, ಮುಖ್ಯ ಅಭಿಯಂತರ ರವಿಕಾಂತ್ ಕಾಮತ್, ಆಡಳಿತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಉಮೇಶ್, ಅಧೀಕ್ಷಕ ಅಭಿಯಂತರ ಕೃಷ್ಣರಾಜ ಕೆ. ಮತ್ತಿತರರು ಉಪಸ್ಥಿತರಿದ್ದರು.