
ಇಂಧನ ಭದ್ರತೆಯ ಯೋಜನೆಗಳನ್ನು ರೂಪಿಸಬೇಕಾಗಿದೆ: ಹರ್ದೀಪ್ ಸಿಂಗ್ ಪುರಿ
ಮಂಗಳೂರು: ಜಗತ್ತಿನ ಒಟ್ಟಾರೆ ಇಂಧನ ಬೇಡಿಕೆಯ ಶೇ 25ರಷ್ಟು ಭಾರತದಿಂದಲೇ ಬರುತ್ತದೆ. ಈ ಇಂಧನದ ಬಳಕೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ಈಗಿನಿಂದಲೇ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ. ಅದಕ್ಕೆ ನಾವು ಸಮರ್ಥವಾಗಿರಬೇಕು. ಭಾರತದಲ್ಲಿ ಶೇ 67ರಷ್ಟು ಮಂದಿ ವಾಹನಗಳಿಗೆ ಇಂಧನ ಬಳಕೆ ಮಾಡುತ್ತಾರೆ. ಭಾರತಕ್ಕೆ ಪ್ರತಿದಿನ 6ರಿಂದ 7 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಬೇಕಾಗುತ್ತದೆ. 20 ವರ್ಷಗಳ ಮುನ್ನೋಟದೊಂದಿಗೆ ಇಂಧನ ಭದ್ರತೆಯ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ಭಾರತ್ ಫೌಂಡೇಶನ್ ವತಿಯಿಂದ ನಗರದ ಡಾ. ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಿದ ಲಿಟ್ ಫೆಸ್ಟ್‌ನ (ಸಾಹಿತ್ಯ ಉತ್ಸವ) 7ನೇ ಆವೃತ್ತಿಯ ಪ್ರಥಮ ದಿನ ಶನಿವಾರ ‘ಎನರ್ಜಿ ಫಾರ್ ಸರ್ವೈವಲ್, ಸೆಕ್ಯುರಿಟಿ ಆಂಡ್ ಕ್ಲೈಮೆಟ್’ ವಿಷಯಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೀರ್ಘ ಕಾಲ ವಸಾಹತು ಆಳ್ವಿಕೆಗೊಳಪಟ್ಟ ಸಂದರ್ಭದಲ್ಲಿ ಭಾರತವು ಜಗತ್ತಿನ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ.23 ರಿಂದ ಶೇ 25ರಷ್ಟು ಕೊಡುಗೆ ನೀಡುತ್ತಿತ್ತು. ನಾವು ಸ್ವತಂತ್ರವಾದಾಗ ಅದು ಸುಮಾರು ಶೇ.3 ರಷ್ಟಕ್ಕೆ ಇಳಿಯಿತು. ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆದ ಸಂದರ್ಭದಲ್ಲಿ ನಮ್ಮ ದೇಶದ ಆರ್ಥಿಕತೆ ದುರ್ಬಲವಾಗಿದ್ದು, ಅದನ್ನು ಬಲು ಎಚ್ಚರಿಕೆಯಿಂದ ನಿಭಾಯಿಸಬೇಕೆಂಬ ಸ್ಥಿತಿ ಇತ್ತು. ಅಲ್ಲಿಂದ ನಾವು 10ನೇ ಸ್ಥಾನಕ್ಕೆ, ಬಳಿಕ 5ನೇ ಸ್ಥಾನಕ್ಕೆ ಏರಿದ್ದೇವೆ. ಶೀಘ್ರವೇ ನಾವು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದ್ದೇವೆ
ನಾನು ರಾಜತಾಂತ್ರಿಕ ಹುದ್ದೆಯಲ್ಲಿದ್ದಾಗ ಭದ್ರತೆಯನ್ನು ಸೇನೆಯೆ ಆಯಾಮದಿಂದಲೇ ನೋಡಲಾಗುತ್ತಿತ್ತು. ಭಾರತ 2027ರಲ್ಲಿ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹಿಮ್ಮಲಿದೆ ಎಂದು ವಿಶ್ವ ಹಣಕಾಸು ಸಂಸ್ಥೆ ಹೇಳಿದೆ. ಆದರೆ ಅದಕ್ಕಿಂತಲೂ ಮುಂಚಿತವಾಗಿ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭರತ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಕ್ತಿ ಮೂಲಗಳ ವೈವಿಧ್ಯತೆ ಬೇಕಾಗಿದೆ. ಒಂದೇ ಮೂಲವನ್ನು ಹೆಚ್ಚು ಅವಲಂಬಿಸಿರಬಾರದು. ವಿಶ್ವದಲ್ಲಿ ಕಚ್ಚಾತೈಲದ ಕೊರತೆಯಿಲ್ಲ. ಆದರೆ ಆಮದು ವೆಚ್ಚ ಹೆಚ್ಚುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಚ್ಚಾತೈಲವನ್ನು ಪಡೆಯುವುದೇ ಒಂದು ಸವಾಲು. ಬ್ರೆಜಿಲ್ ದಿನವೊಂದಕ್ಕೆ ೩ ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಉತ್ಪಾದಿಸುತ್ತಿದೆ. ಯುರೋಪ್ ದೇಶಗಳಿಂದ ಪ್ರತಿದಿನ 13 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಮಾರುಕಟ್ಟೆಗೆ ಬರುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ದಿನೇ ದಿನೇ ಹೆಚ್ಚು ಹೆಚ್ಚು ಕಚ್ಚಾತೈಲ ಪೂರೈಕೆ ಆಗುತ್ತಿದೆ. ಹೀಗಾಗಿ ಕಚ್ಚಾತೈಲದ ಕೊರತೆ ಇಲ್ಲ ಎಂದು ಹೇಳಿದರು.
ಡಾ. ನಂದಕಿಶೋರ್ ಮುಖ್ಯ ಎಂ.ಎಸ್. ಸಮನ್ವಯಕಾರರಾಗಿದ್ದರು.