ರಾಷ್ಟ್ರದ ಹಿತ ಚಿಂತನೆಗೆ ಪ್ರೇರಣೆಯಾಗಲಿ: ಮಂಗಳೂರು ಸಾಹಿತ್ಯ ಉತ್ಸವಕ್ಕೆ ಚಾಲನೆ ಎಸ್.ಎಲ್. ಬೈರಪ್ಪ ಹೇಳಿಕೆ

ರಾಷ್ಟ್ರದ ಹಿತ ಚಿಂತನೆಗೆ ಪ್ರೇರಣೆಯಾಗಲಿ: ಮಂಗಳೂರು ಸಾಹಿತ್ಯ ಉತ್ಸವಕ್ಕೆ ಚಾಲನೆ ಎಸ್.ಎಲ್. ಬೈರಪ್ಪ ಹೇಳಿಕೆ


ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಡುತ್ತಿರುವ ಮಂಗಳೂರು ಸಾಹಿತ್ಯೋತ್ಸವದ ಏಳನೇ ಆವೃತ್ತಿಗೆ ನಗರದ ಡಾ. ಟಿ. ಎಂ. ಎ. ಪೈ ಇಂಟರ್ ನ್ಯಾಷನಲ್ ಕನ್ವೆನ್ಸನ್ ಸೆಂಟರ್‌ನಲ್ಲಿ ಇಂದು ಚಾಲನೆ ದೊರೆಯಿತು.

ಚಾಲನೆ ನೀಡಿದ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ, ಹೊಸ ತಿಳಿವುಗಳನ್ನು ನೀಡುವ ಈ ಸಾಹಿತ್ಯ ಉತ್ಸವ ಯುವ ಮನಸ್ಸುಗಳನ್ನು ರಾಷ್ಟ್ರದ ಹಿತಚಿಂತನೆಗೆ ಒರೆ ಹಚ್ಚಲು ಪ್ರೇರಣೆಯಾಗಲಿ ಎಂದರು. 

ಅವಿಭಜಿತ ದಕ್ಷಿಣ ಕನ್ನಡದ ಜನರು ಏನೇ ಕಾರ್ಯಕ್ರಮ ಮಾಡಿದರೂ ಅದರಲ್ಲೊಂದು ಅಚ್ಚುಕಟ್ಟುತನ ಇರುತ್ತದೆ. ಈ ಕಾರಣದಿಂದಾಗಿ ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಭೂಮಿ ಕನ್ನಡ ನಾಡಿಗೆ ಅನೇಕ ವೈದ್ಯರು, ಶಿಕ್ಷಕರು ಸೇರಿದಂತೆ ಕೋಟ ಶಿವರಾಮ ಕಾರಂತ, ರಾಷ್ಟ್ರಕವಿ ಗೋವಿಂದ ಪೈ, ಪಂಜೆ ಮಂಗೇಶರಾಯರು, ಸೇಡಿಯಾಪು, ವ್ಯಾಸರಾಯ ಬಲ್ಲಾಳರಂತಹ ಹೆಸರಾಂತ ಸಾಹಿತಿಗಳನ್ನು ನೀಡಿದೆ ಎಂದರು.

ವರ್ಷಕ್ಕೊಮ್ಮೆ ದೇಶದ ಮೂಲೆ, ಮೂಲೆಗಳಿಂದ ಖ್ಯಾತನಾಮರನ್ನು ಕರೆಯಿಸಿ ವಿವಿಧ ವೇದಿಕೆಗಳಲ್ಲಿ ವಿಚಾರ ಸಂಕೀರ್ಣ ಏರ್ಪಡಿಸುತ್ತಿದ್ದೀರಿ. ಆದರೆ ಇಲ್ಲಿ ಚರ್ಚಿಸಿದ, ಮಂಡಿಸಿದ ವಿಷಯಗಳು ತಲುಪಬೇಕಾದವರನ್ನು ತಲುಪುತ್ತಿದೆಯೇ, ನೀವು ನಿರೀಕ್ಷಿಸಿದ ಪರಿಣಾಮ ಆಗುತ್ತಿದೆಯೇ ಎಂಬ ಆತ್ಮವಿಶ್ವಾಸ ಮುಖ್ಯವಾಗಿದೆ. ಆದಾಗದಿದ್ದರೆ ವರ್ಷಕ್ಕೊಂದು ಬಾರಿ ನಡೆಸಲೇಬೇಕಾದ ಕಾರ್ಯಕ್ರಮವಾಗುವ ಮೂಲಕ ಇದು ಯಾಂತ್ರಿಕತೆಗೆ ತಿರುಗುತ್ತದೆ ಎಂದು ಭೈರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಕಾರ್ಯ ಯಾಂತ್ರಿಕವಾದರೆ, ಅಲ್ಲಿ ಹೊಸ ವಿಚಾರ ಮೂಡಲು ಆಸ್ಪದ ಇರುವುದಿಲ್ಲ. ಇದರಿಂದಾಗಿ ಸಮಾಜಕ್ಕೂ ಹೊಸದೇನನ್ನೂ ನೀಡಲಾಗುವುದಿಲ್ಲ. ಸಾಹಿತ್ಯೋತ್ಸವವನ್ನು ವರ್ಷ, ವರ್ಷ ನಡೆಸಿಯೂ ಹೊಸತನವನ್ನು ಕಾಪಾಡಿಕೊಂಡು ಹೋಗುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹೇಳಿದರು.

ನನ್ನನ್ನು ಮಂಗಳೂರು ಲಿಟ್ ಫೆಸ್ಟ್ ಗೆ ಆಹ್ವಾನಿಸಿದ ವೇಳೆ, ಸರ್ ನೇರವಾಗಿ ಮಾತನಾಡಿದರೆ ಎಲ್ಲೆಲ್ಲೊ ಹೋಗುವ ಸಾಧ್ಯತೆಯಿದೆ. ಅದಕ್ಕೆ ನಿಮ್ಮ ಭಾಷಣ ಬರೆದುಕೊಂಡು ಬಂದು ಓದಿ ಅಂತ ಹೇಳಿದ್ದರು. ಹಾಗಾಗಿ ನಾನು ಈಗ ಬರೆದುಕೊಂಡು ಬಂದ ಭಾಷಣ ಓದುತ್ತೇನೆ ಎಂದು ಹೇಳಿ ಭೈರಪ್ಪ ಮಾತು ಆರಂಭಿಸಿದ್ದರು.

ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ. ರವಿ ಮುಖ್ಯ ಅತಿಥಿಗಳಾಗಿದ್ದರು. ಭಾರತ್ ಫೌಂಡೇಶನ್ ಟ್ರಸ್ಟ್‌ನ ಪ್ರತಿನಿಧಿ ಸುನಿಲ್ ಕುಲ್ಕರ್ಣಿ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article