
ಶಾಸಕ ಕಾಮತ್ ಮೇಲೆ ಸುಳ್ಳು ಆರೋಪ ಹೊರಿಸಿ ಎಫ್‌ಐಆರ್ ದಾಖಲು: ಖಂಡನೆ
ಮಂಗಳರು: ಶಕ್ತಿನಗರದ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಶಾಸಕ ವೇದವ್ಯಾಸ ಕಾಮತ್ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ರಾಜಗೋಪಾಲ್ ರೈ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಶಾಸಕರ ಸಹಿತ ಬಿಜೆಪಿ ಪ್ರಮುಖರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಯಾವುದೇ ಗೊಂದಲಗಳಿಲ್ಲದೇ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಗೊಂದಲ ಸೃಷ್ಟಿಸಿ, ಗಲಭೆಯಾಗುವಂತೆ ಮಾಡಿ ಅದನ್ನು ಬಿಜೆಪಿಯವರ ತಲೆಗೆ ಕಟ್ಟುವುದು ಕಾಂಗ್ರೆಸ್ಸಿನ ಜಾಯಮಾನ. ಇದೀಗ ಅದರ ಮುಂದುವರಿದ ಭಾಗವಾಗಿ ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ಸಿಗನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಕ್ತಿನಗರದ ಶ್ರೀಕೃಷ್ಣಮಂದಿರದಲ್ಲಿ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವಕ್ಕೆ ಶಾಸಕರು ಆಗಮಿಸಿದ ಸಂದರ್ಭ ಸಹಜ ಹಾಗೂ ತಮಾಷೆಯ ಮಾತುಕತೆಗಳು ನಡೆದಿವೆ. ಶಾಸಕರು ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಕೆಲವೊಂದು ಕಾಂಗ್ರೆಸ್ಸಿಗರು ‘ಶಾಸಕರನ್ನು ಬಿಡಬಾರದು, ಮುತ್ತಿಗೆ ಹಾಕಬೇಕು’ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ದೇವಸ್ಥಾನಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅನುದಾನ ತರುವ ಯೋಗ್ಯತೆ ಕಾಂಗ್ರೆಸಿಗರಿಗೆ ಇಲ್ಲ. ಹಿಂದೂಗಳ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ನಡೆಯಲೂಬಾರದು. ಇದು ಕಾಂಗ್ರೆಸ್ಸಿಗರ ಉದ್ದೇಶ ಎಂದು ಆರೋಪಿಸಿದರು.
ಶಾಸಕರ ಜತೆಗಿದ್ದ ಪರಿಶಿಷ್ಟ ಜಾತಿಯ ಬಂಧುವೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ನೊಂದ ವ್ಯಕ್ತಿ ದೂರು ಕೊಡಲು ಪೊಲೀಸ್ ಠಾಣೆಗೆ ಹೋದಾಗ ವಿಚಲಿತರಾದ ಕಾಂಗ್ರೆಸ್ಸಿಗರು, ‘ನಮ್ಮ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಾದರೆ ತೊಂದರೆಯಾಗುತ್ತದೆ’ ಎಂಬ ಭಯದಿಂದ ಕಾಂಗ್ರೆಸ್ಸಿಗನೊಬ್ಬ ತನ್ನ ಶರ್ಟ್ ತಾನೇ ಹರಿದುಕೊಂಡು, ಆಸ್ಪತ್ರೆಗೆ ಹೋಗಿ ಮಲಗಿ ಶಾಸಕರ ವಿರುದ್ಧವೇ ದೂರು ನೀಡಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ. ಶಾಸಕರ ವಿರುದ್ಧ ಈ ಹಿಂದೆಯೂ ಇಂತಹುದೇ ಮಸಲತ್ತು ನಡೆದಿತ್ತು ಎಂದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಜನರನ್ನು ಶಾಸಕರ ವಿರುದ್ಧ ಎತ್ತಿ ಕಟ್ಟಲು ನೋಡಿದ್ದು ಯಾರು? ಜನರಿಗೆ ತಪ್ಪು ಸಂದೇಶ ನೀಡಿ ಗೊಂದಲ ಸೃಷ್ಟಿಸಿದ್ದು ಯಾರು? ಈ ಬಗ್ಗೆ ಸೂಕ್ತ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಮತ್ತು ಪರಿಶಿಷ್ಟ ಸಮುದಾಯದ ಬಂಧುವೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಶೀಘ್ರವಾಗಿ ಬಂಽಸಬೇಕು ಎಂದು ರಾಜಗೋಪಾಲ ರೈ ಆಗ್ರಹಿಸಿದರು.
ನಿಕಟಪೂರ್ವ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ ಮಾತನಾಡಿ, ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ಯಾರೂ ಸ್ಥಳದಲ್ಲಿ ಇರಲಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡಿದ್ದಾರೆ. ನಾನು ಸ್ಥಳದಲ್ಲಿದ್ದೆ. ಯಶವಂತ ಪ್ರಭು ಎಂಬವರು ಶಾಸಕರ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಸಕರು ಯಾರಿಗೂ ಹಲ್ಲೆ ನಡೆಸಿಲ್ಲ. ಈ ಬಗ್ಗೆ ಯಾವುದೇ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ನಾವು ಸಿದ್ದ. ಶಾಸಕರು ಯಾವುದೇ ಆಣೆ ಪ್ರಮಾಣಕ್ಕೆ ಸಿದ್ದವಾಗಿದ್ದಾರೆ ಎಂದರು.
ನಿಕಟಪೂರ್ವ ಕಾರ್ಪೋರೇಟರ್ ಶಕೀಲಾ ಕಾವ ಮಾತನಾಡಿ, ಯಶವಂತ ಪ್ರಭು ಎಂಬವರು ಶಾಸಕರ ವಿರುದ್ಧ ಮಾತನಾಡುವುದು ಇದು ಮೊದಲಲ್ಲ. 2018 ರ ಶಾಸಕರ ಮೊದಲ ಚುನಾವಣೆಯಲ್ಲೂ ಈ ರೀತಿ ಸುಳ್ಳು ಆರೋಪ ಮಾಡಿದ್ದರು. ಶಕ್ತಿನಗರದಲ್ಲಿ ಪ್ರತಿ ಬಾರಿ ಅವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಶಾಸಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದರು.
ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಪ್ರತಿಪಕ್ಷಗಳ ಯಾವ ನಾಯಕರ ಮೇಲೂ ಸುಳ್ಳು ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿರಲಿಲ್ಲ. ಕಾಂಗ್ರೆಸ್ಸಿನ ಇಂತಹ ಕುತಂತ್ರಗಳನ್ನು ನಾವು ಕಾನೂನು ಮೂಲಕವೇ ಎದುರಿಸುತ್ತೇವೆ ಎಂದು ರಾಜಗೋಪಾಲ ರೈ ಹೇಳಿದರು.
ನಿಕಟಪೂರ್ವ ಕಾರ್ಪೋರೇಟರ್ ವನಿತಾ ಪ್ರಸಾದ್, ಬಿಜೆಪಿ ಜಿಲ್ಲಾ ವಕ್ತಾರರಾದ ಮೋಹನ್ ರಾಜ್, ಅರುಣ್ ಜಿ. ಶೇಟ್ ಉಪಸ್ಥಿತರಿದ್ದರು.