
ಶಾಂಭವಿ ಹೊಳೆಗೆ ಮೀನುಮರಿಗಳ ಅರ್ಪಣೆ
ಮುಲ್ಕಿ: ರಾಜ್ಯ ಮೀನುಗಾರಿಕಾ ಇಲಾಖೆಯವರು ಸುಮಾರು ನಾಲ್ಕೂವರೆ ತಿಂಗಳು ಸಾಕಿ ಸಲಹಿದ ತಲಾ 15 ಗ್ರಾಂ. ತೂಕದ ಮುಡಾವು(ಕುರುಡಿ) ಮೀನುಮರಿಗಳನ್ನು ಶಾಂಭವಿ ಹೊಳೆಗೆ ಅರ್ಪಿಸುವ ಕಾರ್ಯಕ್ರಮ ಭಾನುವಾರ ಮುಲ್ಕಿಯ ಬಪ್ಪನಾಡು ಬಡಗುಹಿತ್ಲುವಿನ ಶಾಂಭವಿ ಹೊಳೆಯ ಜಳಕದ ಕಟ್ಟೆ ಬಳಿ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಮೀನು ಮರಿಗಳನ್ನು ಹೊಳೆಗೆ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೀನು ಸಂತತಿ ಉಳಿಸುವ ಇಲಾಖೆಯ ಶ್ರಮ ಶ್ಲಾಘನೀಯ ಎಂದರು.
ಸುಮಾರು 15 ಸಾವಿರ ಮೀನು ಮರಿಗಳನ್ನು ಹೊಳೆಗೆ ಬಿಡಲಾಯಿತು. ಪ್ರತೀ ವರ್ಷ ಮೀನುಗಾರಿಕಾ ಇಲಾಖೆ ವತಿಯಿಂದ ವಿವಿಧ ಜಾತಿಯ ಬೆಲೆ ಬಾಳುವ ಮೀನುಮರಿಗಳನ್ನು ಹೊಳೆ ಮತ್ತು ನದಿಗಳಿಗೆ ಬಿಡಲಾಗುತ್ತಿದ್ದು, ಮೀನಿನ ಸಂತತಿ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತಿದೆ. ಸಮುದ್ರ ಸೇರುವ ಹೊಳೆ-ನದಿಗಳಲ್ಲಿ ಮುಡಾವು ಮೀನುಗಳು ಸ್ವಚ್ಚಂದವಾಗಿ ಸುಮಾರು 10 ಕೆಜಿ ತೂಕದವರೆಗೂ ಬೆಳೆಯುತ್ತದೆ.
ಒಟ್ಟು 40 ಸಾವಿರ ಮೀನು ಮರಿಗಳನ್ನು ಮೀನುಗಾರಿಕಾ ಇಲಾಖೆಯವರು ತಂದಿದ್ದು, ಮಂಗಳೂರಿನ ಬಂಗ್ರಕೂಳೂರು ಮತ್ತು ಬಜಾಲ್ ಬಳಿ ನದಿಗೆ ಬಿಡಲಾಗಿದೆ.
ಈ ಸಂದರ್ಭ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಯ್ಯ, ಡಿ.ಡಿ. ದಿಲೀಪ್ ಕುಮಾರ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಪೂರ್ವಾಧ್ಯಕ್ಷರುಗಳಾದ ಸುನಿಲ್ ಆಳ್ವ ಮತ್ತು ಸುಭಾಷ್ ಶೆಟ್ಟಿ, ಸದಸ್ಯೆ ದಯಾವತಿ ಅರುಣ್ ಅಂಚನ್, ಪ್ರಮುಖರಾದ ಕಮಲಾಕ್ಷ ಬಡಗುಹಿತ್ಲು, ಪುರುಷೋತ್ತಮ ರಾವ್, ನೀಲಾಧರ್ ಬಡಗುಹಿತ್ಲು ಮತ್ತಿತರರು ಉಪಸ್ಥಿತರಿದ್ದರು.