
ಸಿಐಎಸ್‌ಎಫ್ ಮಹಿಳಾ ಅಧಿಕಾರಿಯಿಂದ ವಂಚನೆ: ಚೆನ್ನೈ ಯುವಕ ಆತ್ಮಹತ್ಯೆ
ಮಂಗಳೂರು: ಸಿಐಎಸ್‌ಎಫ್ (ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆ)ನ ಮಹಿಳಾ ಅಧಿಕಾರಿಯಾಗಿರುವ ಯುವತಿಯೊಬ್ಬಳು ತನ್ನನ್ನು ಪ್ರೀತಿಸಿ ದೈಹಿಕ ಸಂಬಂಧ ಬೆಳೆಸಿ ಮೋಸ ಮಾಡಿದ್ದಾಳೆಂದು ಆರೋಪಿಸಿ ಉತ್ತರ ಪ್ರದೇಶ ಮೂಲದ ಯುವಕನೊಬ್ಬ ಮಂಗಳೂರಿನಲ್ಲಿ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತನನ್ನು ಉತ್ತರ ಪ್ರದೇಶದ ಗಾಜಿಪುರ ನಿವಾಸಿ, ಚೆನ್ನೈಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಅಭಿಷೇಕ್ ಸಿಂಗ್ (40) ಎಂದು ಗುರುತಿಸಲಾಗಿದೆ.
ಅಭಿಷೇಕ್ ರಾವ್ ಅಂಡ್ ರಾವ್ ಸರ್ಕಲ್‌ನಲ್ಲಿರುವ ವಸತಿ ಗೃಹದಲ್ಲಿ ಎರಡು ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃತ್ಯಕ್ಕೂ ಮುನ್ನ 20 ನಿಮಿಷಗಳ ವಿಡಿಯೋ ಮಾಡಿದ್ದು ತನ್ನ ಸಾವಿಗೆ ಆಕೆಯೇ ಕಾರಣ ಎಂದು ಹೇಳಿ ವಿಡಿಯೋವನ್ನು ಇನ್ ಸ್ಟಾ ಗ್ರಾಮಿನಲ್ಲಿ ಅಪ್ಲೋಡ್ ಮಾಡಿದ್ದಾನೆ.
ಆತ್ಮಹತ್ಯೆಗೆ ಮುನ್ನ ಅಭಿಷೇಕ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಅದರಲ್ಲಿ ಮೋನಿಕಾ ಸಿಹಾಗ್ ಅವರು ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೋನಿಕಾ ಸಿಹಾಗ್ ಈಗಾಗಲೇ ವಿವಾಹಿತೆಯಾಗಿದ್ದು, ಆ ವಿಷಯವನ್ನು ಮುಚ್ಚಿಟ್ಟು ಅಭಿಷೇಕ್ ಸಿಂಗ್ ಅವರ ಜೊತೆ ಸಂಬಂಧ ಬೆಳೆಸಿದ್ದರು ಎನ್ನಲಾಗಿದೆ. ಪ್ರೀತಿಯ ನೆಪದಲ್ಲಿ ತನಗೆ ಮೋಸ ಮಾಡಿದ್ದಾಳೆ. ತನ್ನಿಂದ ದೈಹಿಕ ಸುಖ, ಆರ್ಥಿಕ ಲಾಭ ಪಡೆದು ಮೋಸ ಮಾಡಿದ್ದಾಳೆ. ಆಗೆ ಹಲವರ ಜೊತೆಗೆ ಇದೇ ರೀತಿಯ ಸಂಬಂಧ ಇಟ್ಟುಕೊಂಡಿರುವುದು ತಿಳಿದುಬಂದಿದೆ. ಮೋನಿಕಾಗೆ ಎಂಟು ಲಕ್ಷದಷ್ಟು ಮೌಲ್ಯದ ಚಿನ್ನಾಭರಣ ತೆಗೆದುಕೊಟ್ಟಿದ್ದೇನೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾನೆ. ಮೋನಿಕಾ ಸಿಂಗ್, ಗುಜರಾತಿನ ಅಹ್ಮದಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ ಎಂದು ಅಭಿಷೇಕ್ ಹೇಳಿಕೊಂಡಿದ್ದಾನೆ. ಘಟನೆ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.