ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಹಲ್ಲೆ: ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಬಳೆ ತೊಟ್ಟು ಕೂತಿಲ್ಲ

ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಹಲ್ಲೆ: ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಬಳೆ ತೊಟ್ಟು ಕೂತಿಲ್ಲ


ಮಂಗಳೂರು: ನಗರದ ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಧಾರ್ಮಿಕ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದು ಖಂಡನೀಯ. ಕಾನೂನಿಗೆ ಗೌರವ ಕೊಟ್ಟು ಕಾಂಗ್ರೆಸ್ ಸುಮ್ಮನಿದ್ದರೆ ಅದನ್ನೇ ದೌರ್ಬಲ್ಯ ಎಂದು ಭಾವಿಸಬೇಡಿ, ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಬಳೆ ತೊಟ್ಟು ಕೂತಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ‘ದೇವಸ್ಥಾನಕ್ಕೆ ಕಲ್ಲು ಹೊಡೆಯುವ ನಿಮಗೆ ಇಲ್ಲೇನು ಕೆಲಸ’ ಎಂದು ನಿಂದಿಸಿರುವುದು ಮಾತ್ರವಲ್ಲದೆ, ನಮ್ಮ ಕಾರ್ಯಕರ್ತರ ಹುಟ್ಟಿನ ಬಗ್ಗೆಯೂ ಕೀಳಾಗಿ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಲ್ಲೆಗೆ ಒಳಗಾದ ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಅವರ ತಂದೆ ಈ ಶ್ರೀಕೃಷ್ಣ ಭಜನಾ ಮಂದಿರ ಸ್ಥಾಪಕರಲ್ಲಿ ಒಬ್ಬರು. ಇದೀಗ ಮಂದಿರದ ಜೀರ್ಣೋದ್ಧಾರ ಕಾರ್ಯವನ್ನು ಪಕ್ಷಾತೀತವಾಗಿ ಅಲ್ಲಿನ ಸ್ಥಳೀಯರು ಸೇರಿ ನಡೆಸಿದ್ದಾರೆ. ಆದರೆ ಶಾಸಕರು ವೇದಿಕೆಯ ಕೆಳಗೆ ಮಾತ್ರವಲ್ಲದೆ, ವೇದಿಕೆ ಮೇಲೆ ತಮ್ಮ ಭಾಷಣದಲ್ಲೂ ‘ಭಜನಾ ಮಂದಿರ, ದೇವಸ್ಥಾನಗಳಿಗೆ ಕಲ್ಲು ಹೊಡೆಯುವವರೂ ಇಲ್ಲಿದ್ದಾರೆ’ ಎಂದು ಹೇಳಿದ್ದಾರೆ. ಹಲ್ಲೆಗೊಳಗಾಗಿದ್ದ ಯಶವಂತ ಪ್ರಭು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ವೇಳೆ ಪಾಂಡೇಶ್ವರ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್ ಗೂಂಡಾಗಳನ್ನು ಸೇರಿಸಿ ಗಲಾಟೆ ಮಾಡಿದ್ದಾರೆ ಎಂದು ಹರೀಶ್ ಕುಮಾರ್ ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರು, ಶಾಸಕರಿಗೆ ರಾಜ್ಯದಲ್ಲಿ ಎರಡು ವರ್ಷಗಳಿಂದ ತಮ್ಮ ಸರ್ಕಾರ ಇಲ್ಲ ಎಂಬುದೇ ಮರೆತು ಹೋದಂತಿದೆ. ಹಾಗಾಗಿ ತಮ್ಮ ಅವಧಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆಸಿದ ದೌರ್ಜನ್ಯ, ಹಲ್ಲೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗಿರೋದು ಕಾಂಗ್ರೆಸ್ ಸರ್ಕಾರ. ಈ ಪ್ರಕರಣದ ವಿರುದ್ಧ ಪೊಲೀಸ್ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಪ್ರಕರಣದ ಬಗ್ಗೆ ಈಗಾಗಲೇ ಪಕ್ಷದ ಮುಖಂಡರು ಪೊಲೀಸ್ ಆಯುಕ್ತರ ಬಳಿ ಮಾತನಾಡಿದ್ದು, ಪಕ್ಷದ ವತಿಯಿಂದ ನಿಯೋಗ ತೆರಳಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾತನಾಡಿ, ಶಾಸಕ ವೇದವ್ಯಾಸ ಕಾಮತ್ ಅವರ ವರ್ತನೆ ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ. ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂಗಳನ್ನು ವಿಭಜಿಸೋದು ಇವರೇ. ಶಾಸಕರ ಹೇಳಿಕೆ ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ನೋವು ತರಿಸಿದೆ ಎಂದು ಹೇಳಿದರು.

ಇಂದು ಸತ್ಯಪ್ರಮಾಣಕ್ಕೆ ಆಹ್ವಾನ:

ಯಶವಂತ ಪ್ರಭು ಅವರ ವಿರುದ್ಧ ಮಣಿ ಎಂಬವರು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ದಲಿತ ನಿಂದನೆ ಮಾಡಿದ್ದೇ ನಿಜವಾದರೆ ಶಾಸಕರು ಹಾಗೂ ಮಣಿ ಎಂಬವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ಕದ್ರಿ ಮುಂಜನಾಥ ದೇವಸ್ಥಾನಕ್ಕೆ ಹಾಜರಾಗಿ ಈ ಬಗ್ಗೆ ಸತ್ಯಪ್ರಮಾಣ ಮಾಡಲಿ, ನಾವೂ ಬರುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್ ಆಹ್ವಾನ ನೀಡಿದರು.

ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್., ಪ್ರಕಾಶ್ ಸಾಲ್ಯಾನ್, ಶಾಲೆಟ್ ಪಿಂಟೋ, ವಿಶ್ವಾಸ್ ದಾಸ್, ಲಾರೆನ್ಸ್ ಡಿಸೋಜ, ಶುಭೋದಯ ಆಳ್ವ, ದಯಾನಂದ ನಾಯ್ಕ್ ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article