
ಯೂನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯವಾಟಿಕೆ, ಅನೈತಿಕ ದಂಧೆ ನಡೆಸುತ್ತಿರುವವರ ಪರವಾನಿಗೆ ರದ್ದು ಮಾಡಲು ಬಜರಂಗದಳ ದುರ್ಗಾವಾಹಿನಿ ಆಗ್ರಹ
ಮಂಗಳೂರು: ಯೂನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯವಾಟಿಕೆ, ಅನೈತಿಕ ದಂಧೆ ನಡೆಸುತ್ತಿರುವವರ ಪರವಾನಿಗೆ ರದ್ದು ಮಾಡಲು ಬಜರಂಗದಳ ದುರ್ಗಾವಾಹಿನಿ ಮಾಧ್ಯಮದ ಎದುರು ಆಗ್ರಹಿಸಿದೆ.
ಸುಸಂಸ್ಕೃತ ನಗರವಾದ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ ಹೆಚ್ಚುತ್ತಿದೆ ಅಲ್ಲದೆ ಯುನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯವಾಟಿಕೆ, ಅನೈತಿಕ ದಂಧೆಗಳು ನಡೆಯುತ್ತಿದೆ. ಈ ದಂಧೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಪ್ರೇರೇಪಿಸಲಾಗುತ್ತಿದೆ ಹಾಗೆಯೆ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಈ ದಂಧೆಯಲ್ಲಿ ಬಳಸಲಾಗುತ್ತಿದೆ ಎಂದು ಕೇಳಿ ಬರುತ್ತಿದೆ ಎಂದು ವಿಶ್ವಹಿಂದೂ ಪರಿಷದ್‌ನ ಜಿಲ್ಲಾಧ್ಯಕ್ಷ ಹೆಚ್.ಕೆ. ಪುರುಷೋತ್ತಮ ಹೇಳಿದರು.
ಈ ಸಂಭಂದ ಜನಪ್ರತಿನಿಧಿಗಳಿಗೆ, ಮಹಾನಗರ ಪಾಲಿಕೆ ಕಮಿಷನರ್. ಮಹಾಪೌರರಿಗೆ ಮತ್ತು ಪೊಲೀಸ್ ಇಲಾಖೆಗೆ ಈ ದಂಧೆಗೆ ಕಡಿವಾಣ ಹಾಕಲು ಮನವಿ ನೀಡಿದ್ದು ಸಮಾಜದ ಸ್ವಾಸ್ತ್ರ ನೈತಿಕತೆಗಳ ರಕ್ಷಣೆಗಾಗಿ, ಅಪ್ರಾಪ್ತ ವಯಸ್ಸಿನ ಮಕ್ಕಳ ರಕ್ಷಣೆಗಾಗಿ ಯೂನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಸುತ್ತಿರುವ ವೇಶ್ಯವಾಟಿಕೆ, ಅನೈತಿಕ ದಂಧೆಗೆ ಕಡಿವಾಣ ಹಾಕಿ ಅವರ ಪರವಾನಿಗೆಯನ್ನು ರದ್ದು ಮಾಡಿ ಅದನ್ನು ನಡೆಸುತ್ತಿರುವವರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಆಗ್ರಹಿಸುತ್ತೇವೆ ಎಂದರು.
ಈ ಅನೈತಿಕ ದಂಧೆಯ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮುಂದೆ ಹಾಗುವ ಎಲ್ಲ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ಸಂಧರ್ಭದಲ್ಲಿ ಕೊಡುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ, ಜಿಲ್ಲಾ ಸಂಯೋಜಕಿ ಶ್ವೇತ ಅದ್ಯಪಾಡಿ ಇದ್ದರು.