
ಪ್ರಶಂಸೆಗೆ ಪಾತ್ರವಾದ ವೈದ್ಯರ ಮಾನವೀಯ ಕಾರ್ಯ
ಬಂಟ್ವಾಳ: ಕೆಲ ಸಮಯದಿಂದ ಕಲ್ಲಡ್ಕ ಪೇಟೆಯ ಪರಿಸರದಲ್ಲಿ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕಲ್ಲಡ್ಕದ ಕ್ಲಿನಿಕ್ವೊಂದರ ಮನೋರೋಗ ತಜ್ಞರಾದ ಡಾ. ರಾಜೇಶ್ ಅವರ ನೇತೃತ್ವದಲ್ಲಿ ಸ್ಥಳೀಯರು ಉಪಚರಿಸಿ ಪ್ರಥಮ ಚಿಕಿತ್ಸೆಯನ್ನಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಸೇವಾ ಶ್ರಮಕ್ಕೆ ದಾಖಲಿಸಿದ ಘಟನೆ ನಡೆದಿದೆ.
ಕಲ್ಲಡ್ಕದ ಡಾ.ಚಂದ್ರಶೇಖರ್ ರವರ ಚೇತನಾ ಕ್ಲಿನಿಕ್ ಇಲ್ಲಿನ ಮನೋರೋಗ ತಜ್ಞರಾದ ಡಾ. ರಾಜೇಶ್ ಅವರು ಕಲ್ಲಡ್ಕ ಪರಿಸರದಲ್ಲಿ ಹಲವು ದಿನಗಳಿಂದ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿ ಈತನಿಗೆ ಸೂಕ್ತವಾಗಿ ಉಪಚರಿಸಿದರೆ ಉತ್ತಮ ವ್ಯಕ್ತಿಯಾಗಿ ರೂಪಿಸಬಹುದು ಎಂಬ ಕಲ್ಪನೆಯಲ್ಲಿ ಮಾನಸಿಕ ಅಸ್ವಸ್ಥನನ್ನು ಸ್ವತ: ವಿಚಾರಿಸಿದರು.
ತಮಿಳುನಾಡಿನ ಕಾಂಚಿ ಪುರಂ ನಿವಾಸಿ ಎಂದು ಹೇಳಿದ್ದ ಅತನಿಗೆ ಪ್ರಥಮ ಚಿಕಿತ್ಸೆಯನ್ನಿತ್ತು,ಬಳಿಕ ಕ್ಲಿನಿಕ್ ಸಿಬ್ಬಂದಿ ವಿನಯಾ ಮಿತಬೈಲು, ಜಮಾಲ್ ಕರಾವಳಿ ಮೆಡಿಕಲ್, ಸೌಕತ್ ಕಲ್ಲಡ್ಕ, ಅರಿಶ್ ಅಮರ್, ಕಲ್ಲಡ್ಕ ಶೌರ್ಯ ತಂಡದ ಸದಸ್ಯರಾದ ಸಂತೋಷ್ ಮತ್ತಿತರರ ಸಹಕಾರದೊಂದಿಗೆ ಆತನನ್ನು ಧೈಗೊಳಿ ಸತ್ಯಸಾಯಿ ಸೇವಾಶ್ರಮಕ್ಕೆ ದಾಖಲಿಸಲಾಯಿತು.
ಅಲ್ಲಿ ಆತನಿಗೆ ಸೂಕ್ತ ಚಿಕಿತ್ಸೆಯನ್ನಿತ್ತು ಸಾಮಾನ್ಯ ವ್ಯಕ್ತಿಯಂತೆ ರೂಪಿಸಿ ನಂತರ ಸಂಬಂಧ ಪಟ್ಟ ಇಲಾಖೆಯ ಮೂಲಕ ಆತನ ಮನೆಯವರನ್ನು ಸಂಪರ್ಕಿಸಿ ಆ ಮೂಲಕ ಆತನ ಮನೆಗೆ ಸೇರಿಸಲು ಪ್ರಯತ್ನಿಸಲಾಗುವುದು ಎಂದು ವೈದ್ಯರಾದ ರಾಜೇಶ್ ತಿಳಿಸಿದ್ದಾರೆ.ಇವರ ಈ ಕಾರ್ಯ ಸ್ಥಳೀಯವಾಗಿ ಪ್ರಶಂಸೆಗೊಳಗಾಗಿದೆ.