
ಕಪಾಟಿನಲ್ಲಿರಿಸಿದ್ದ ನಗ-ನಗದು ಕಳವು
ಬಂಟ್ವಾಳ: ತಾಲೂಕು ಮಣಿನಾಲ್ಕೂರು ಗ್ರಾಮದ ಎರ್ಮಾಲ್ ಎಂಬಲ್ಲಿ ವ್ಯಕ್ತಿಯೋರ್ವರ ಮನೆಯ ಕಪಾಟಿನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಮಾಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಣಿನಾಲ್ಕೂರು ಗ್ರಾಮದ ಎರ್ಮಾಲ್ ನಿವಾಸಿ ಸಮೀರ ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಅರ್ಕುಳ ಗ್ರಾಮದ ಕಂಪ ಎಂಬಲ್ಲಿರುವ ತನ್ನ ಗಂಡ ಅಬ್ದುಲ್ಲ್ ನಾಸಿರ್ ಅವರ ನಿವಾಸದಲ್ಲಿ ಫೆ.20 ರಂದು ಸೀಮಂತ ಕಾರ್ಯಕ್ರಮದ ಬಳಿಕ ತಮ್ಮ ಸಂಪ್ರದಾಯದಂತೆ ಅದೇ ದಿನ ಸಂಜೆ ತನ್ನ ತವರು ಮನೆ ಎರ್ಮಾಲ್ ಬಂದಿರುವುದಾಗಿ ಸಮೀರ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಚಿನ್ನದ ನೆಕ್ಲೇಸ್ 2, ಬಳೆ 1, ಕೈ ಚೈನ್ 1, ಚಿನ್ನದ ಕಿವಿ ಓಲೆ 2, ಚಿನ್ನದ ಉಂಗುರ 1, ಪೆಂಡೆಂಟ್ ಇರುವ ಚಿನ್ನದ ಚೈನ್ 1, ರೋಸ್ ಗೋಲ್ಡ್ ಬಳೆ 1, ಅನ್ನು ಧರಿಸಿಕೊಂಡು ಬಂದಿದ್ದು, ಈ ಎಲ್ಲಾ ಚಿನ್ನಭಾರಣ ಹಾಗೂ 5700 ರೂ. ನಗದನ್ನು ತನ್ನ ತಾಯಿ ಮನೆಯ ಕಪಾಟಿನ ಲಾಕರ್ ನಲ್ಲಿರಿಸಿ ಕೀಯನ್ನು ಹಾಕಿ, ಅಲ್ಲಿಯೇ ಕಪಾಟಿನ ಮೇಲೆ ಕೀಯನ್ನು ಇಟ್ಟಿದ್ದು, ಆಕೆ ಗಂಡನ ಜೊತೆ ಆಸ್ಪತ್ರೆಗೆ ತರಳಿದ್ದು, ಆಗ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ತವರು ಮನೆಯಲ್ಲಿ ಬಿಟ್ಟು ಹೋಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಫೆ.27 ರಂದು ಮರಳಿ ತವರು ಮನೆಗೆ ವಾಪಾಸ್ ಬಂದಿದ್ದು, 28 ರಂದು ಬೆಳಿಗ್ಗೆ ಆಸ್ಪತ್ರೆಗೆ ಹೋಗಲೆಂದು ಕಪಾಟಿನಲ್ಲಿರಿಸಲಾಗಿದ್ದ ಹಣವನ್ನು ತೆಗೆಯಲೆಂದು ಹೋದಾಗ, ಕಪಾಟಿನಲ್ಲಿಟ್ಟಿದ್ದ ಹಣ ಹಾಗೂ ಎಲ್ಲಾ ಚಿನ್ನಾಭರಣ ಕಳವಾಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳವಾದ ಚಿನ್ನಾಭರಣ ಸಹಿತ ನಗದು ಸೇರಿ ಒಟ್ಟು ಮೌಲ್ಯ 10,09,700 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.