
ಮೇ.10 ರಂದು ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ
Saturday, March 22, 2025
ಕಾರ್ಕಳ: ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವವು ಮೇ.10 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ಹಿರಿಯ ಸಹಕಾರಿ ದುರೀಣ, ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಕಾರ್ಕಳದ ದಾನಶಾಲೆ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಕಳದಲ್ಲೆ ಪ್ರಾರಂಭಗೊಂಡ ಈ ಸ್ವಸಹಾಯ ಸಂಘ ದೇಶಕ್ಕೇ ಮಾದರಿ ಸಂಘವಾಗಿ ಗುರುತಿಸಲ್ಪಟ್ಟಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು, ಮಹಿಳೆ ಸಮಾಜದ ಕುಟಂಬ ಮಾತ್ರವಲ್ಲ ಸಮಾಜದ ಶಕ್ತಿಯಾಬೇಕು, ಮಹಿಳೆ ಸಾಮಾಜಿಕವಾಗಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವ್ರದ್ದಿ ಹೊಂದಿದರೆ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂಬ ಸದುದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದರು.
ನವೋದಯ ಕುಟುಂಬಕ್ಕೆ ಸೇರಿದ ನಂತರ ಸದಸ್ಯರಿಗೆ ಸುಮಾರು 5 ಲಕ್ಷ ಸಮವಸ್ತ್ರ ವಿತರಣೆಗೆ ಮಾರ್ಚ್ 25ರಂದು ಚಾಲನೆ ನೀಡಲಿದ್ದು ಜಾತಿ, ಧರ್ಮ, ಬಡತನ, ಸಿರಿತನವೆನ್ನುವ ಭೇದವನ್ನು ನಿವಾರಿಸಿ ಎಲ್ಲರೂ ಸಮಾನರು ಎನ್ನುವ ದೃಷ್ಟಿಯಿಂದ ಸಮವಸ್ತ್ರ ನೀಡಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುವ ಮೈಕ್ರೊ ಪೈನಾನ್ಸ್‌ಗಳಿಂದ ಯಾವುದೆ ತೊಂದರೆಗಳಾಗಿಲ್ಲ ಬೇರೆ ಹಣಕಾಸು ಸಂಸ್ಥೆಗಳಿಂದ ರೈತರಿಗೆ, ಜನಸಾಮಾನ್ಯರಿಗೆ ತೊಂದರೆಗಳಾಗುತ್ತಿದೆ ಬಗ್ಗೆ ಸರಕಾರ ಗಮನಿಸಬೇಕು ಎಂದ ಅವರು ಸದಸ್ಯರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಅವರಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ ಅಂತಹ ಪ್ರತಿಭಾವಂತ ಮಕ್ಕಳಿಗೆ ಸಹಾಯ ಮಾಡುವುದರ ಜೊತೆಗೆ ಮಾರ್ಚ್ ನಂತರ ನವೋದಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಸಂಬಳ ಹೆಚ್ಚು ಮಾಡಲಾಗುವುದು ಎಂದರು.
ನವೋದಯ ಸ್ವಸಹಾಯ ಗುಂಪುಗಳು ದೇಶಕ್ಕೆ ಸಂದೇಶವಾಗಿದ್ದು, ನನ್ನ ಬೆಳವಣಿಗೆಗೆ ಮಾದ್ಯಮ ಬಂದುಗಳು ಸ್ವಸಹಾಯ ಸಂಘದ ಸದಸ್ಯರು, ಕಾರಣಕರ್ತರು ಎಂದ ಅವರು ನವೋದಯ ಸ್ವಸಹಾಯ ಸಂಘದಲ್ಲಿ ಸದಸ್ಯರ ಸಾಮರ್ಥ್ಯಕ್ಕೆ ತಕ್ಕಂತೆ ಕಡಿಮೆ ಬಡ್ಡಿದರದಲ್ಲಿ, ಚಕ್ರ ಬಡ್ಡಿಯನ್ನು ವಿಧಿಸದೆ, ಸಾಲ ನೀಡುವ ಸಂದರ್ಭದಲ್ಲಿ ಠೇವಣಿಯನ್ನು ಕಳೆಯದೆ ಸದಸ್ಯರಿಗೆ ಸಾಲ ನೀಡುತ್ತಿದ್ದು ಲಾಭದ ದೃಷ್ಟಿಯಲ್ಲಿ ಜನರನ್ನು ತೊಂದರೆಗೆ ಒಡ್ಡದ ಕಾರಣ ಶೇ.99ಕ್ಕೂ ಅಧಿಕ ಪ್ರಮಾಣದಲ್ಲಿ ಸಾಲದ ಮರು ಪಾವತಿಯಾಗಿದೆ. ಸದಸ್ಯರ ಅಪಘಾತ, ಮರಣ ಸಂದರ್ಭದಲ್ಲಿಚೈತನ್ಯ ವಿಮಾ ಯೋಜನೆಯಡಿಯಲ್ಲಿ 1 ಲಕ್ಷ ರೂ.ಗಳನ್ನು ಅವರ ಕುಟುಂಬಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಮೇಘರಾಜ್ ರಾಜೇಂದ್ರ ಕುಮಾರ್, ಸುನೀಲ್ ಬಜಗೋಳಿ ಉಪಸ್ಥಿತರಿದ್ದರು,
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಪ್ರಧಾನ ವ್ಯವಸ್ಥಾಪಕಿ ಪೂರ್ಣಿಮಾ ವಂದಿಸಿದರು.