
ಯಕ್ಷಗಾನ ಕಲಾವಿದನಿಂದ ಕಲಾವಿದನ ಮೇಲೆ ಹಲ್ಲೆ: ವಿಡಿಯೋ ವೈರಲ್
ಕುಂದಾಪುರ: ಯಕ್ಷಗಾನ ಪ್ರಸಂಗದಲ್ಲಿ ವೇಷ ಹಾಕುವ ವಿಚಾರದಲ್ಲಿ ಉಂಟಾದ ತಗಾದೆಯಿಂದ ಕಿರಿಯ ಕಲಾವಿದನಿಗೆ ಮೇಳದ ಹಿರಿಯ ಕಲಾವಿದರೊಬ್ಬರು ಹಲ್ಲೆ ನಡೆಸಿದ ಘಟನೆ ಮಾ.18 ರಂದು ರಾತ್ರಿ ಬೈಂದೂರು ತಾಲೂಕಿನ ಎಳ್ಳೂರಿನಲ್ಲಿ ನಡೆದಿದೆ.
ಮಾರಣಕಟ್ಟೆ ಯಕ್ಷಗಾನ ಮೇಳದ ಬಿ ತಂಡದಿಂದ ಮಾ.18 ರಂದು ಬೈಂದೂರು ತಾಲೂಕಿನ ಎಳ್ಳೂರಿನಲ್ಲಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆದಿತ್ತು. ಈ ವೇಳೆ ನಂದಿ ವೇಷ ಮಾಡುವ ವಿಚಾರದಲ್ಲಿ ಕಲಾವಿದ ಸ್ತ್ರೀ ವೇಷಧಾರಿ ಪ್ರದೀಪ್ ನಾರ್ಕಳಿ ಮತ್ತು ಕಿರಿಯ ಕಲಾವಿದ ಪ್ರದೀಪ್ ನಾಯ್ಕ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಾಗಿತ್ತು.
ಇದೇ ಕಾರಣಕ್ಕೆ ಬೆಳಗಿನ ಜಾವ ಆಟ ಮುಗಿದ ಮೇಲೆ ಕಲಾವಿದ ಪ್ರದೀಪ್ ನಾಯ್ಕ್ ಮನೆಗೆ ಹೋಗುವ ಸಂದರ್ಭದಲ್ಲಿ ಮೇಳದ ಚೌಕಿಯಲ್ಲೇ ರಾತ್ರಿ ನಡೆದ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ ಪ್ರದೀಪ್ ನಾರ್ಕಳಿ, ಕಿರಿಯ ಕಲಾವಿದ ಪ್ರದೀಪ್ ನಾಯ್ಕ್ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ. ಈ ಘಟನೆಯನ್ನು ಯಾರೋ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಹಲ್ಲೆ ನಡೆಸಿದ ಹಿರಿಯ ಕಲಾವಿದನ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಏನೇ ಭಿನ್ನಾಭಿಪ್ರಾಯವಿದ್ದರೂ ಮೇಳದ ಎಜಮಾನರ ಬಳಿ ತಿಳಿಸಿ ಸರಿಪಡಿಸಿಕೊಳ್ಳಬೇಕೇ ವಿನಃ ಕಲಾವಿದರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.