
ತುಳು ಜನಪದ ಸಾಹಿತ್ಯಕ್ಕೆ ನಂದಾವರರ ಕೊಡುಗೆ ಶ್ಲಾಘನೀಯ: ಎಸ್. ಪ್ರದೀಪ ಕುಮಾರ ಕಲ್ಕೂರ
ಮಂಗಳೂರು: ತುಳು ಜನಪದ ಸಾಹಿತ್ಯದಲ್ಲಿ ಹಾಗೂ ಕನ್ನಡ ಸಾಹಿತ್ಯದಲ್ಲೂ ದಿ. ವಾಮನ ನಂದಾವರ ಅವರ ಕೊಡುಗೆ ಅನನ್ಯವಾದುದು, ತುಳುವರ ರಸಿಕತೆ, ಅರ್ಥವತ್ತಾದ ತುಳು ಗಾದೆ, ತುಳುವಿನ ಸಮಗ್ರ ಸಂಸ್ಕೃತಿಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ನಂದಾವರರು ಹೇಮಾಂಶು ಪ್ರಕಾಶನದ ಮೂಲಕ ತಾವು ಹಾಗೂ ತುಳು ಭಾಷಾ ವಿದ್ವಾಂಸರಿಂದ ಪ್ರಕಟಿಸಿದ ತುಳು ಸಾಹಿತ್ಯ ಕೃತಿಗಳ ಮೂಲಕ ತುಳು ಭಾಷೆಯನ್ನು ಬಹು ಎತ್ತರಕ್ಕೆ ಬೆಳೆಸಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಅವರು ಇಂದು ನಗರದ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಸಾಹಿತಿ ವಾಮನ ನಂದಾವರ ಅವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು.
ಪತ್ನಿ ಚಂದ್ರಕಲಾ ನಂದಾವರರ ಪ್ರೋತ್ಸಾಹದಿಂದ ತುಳು ಭಾಷಾ ಸೌಂದರ್ಯವನ್ನು ಎಳೆ ಎಳೆಯಾಗಿ ಮೊಗೆ ಮೊಗೆದು ನೀಡಿದ ಇವರ ಸಾಧನೆ ಶ್ಲಾಘನೀಯ ಎಂದ ಅವರು ವಿದ್ವಾಂಸರಾದ ದಿವಂಗತ ಕಯ್ಯಾರ, ಪಾ.ವೆಂ. ಆಚಾರ್ಯ, ಡಾ. ಯು.ಪಿ. ಉಪಾಧ್ಯಾಯ ಮೊದಲಾದವರು ಇವರ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ನಂದಾವರರ ಸಾಹಿತ್ಯ ಸೇವೆಯನ್ನು ಕೊಂಡಾಡಿ ಶ್ರದ್ಧಾಂಜಲಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಡಾ. ಗಣೇಶ ಅಮೀನ್ ಸಂಕಮಾರ್, ಭಾಸ್ಕರ ರೈ ಕುಕ್ಕುವಳ್ಳಿ, ನಿತ್ಯಾನಂದ ಕಾರಂತ ಪೊಳಲಿ, ಜಿ.ಕೆ ಭಟ್ ಸೇರಾಜೆ, ಕೂಡ್ಲು ಮಹಾಬಲ ಶೆಟ್ಟಿ, ಎಚ್. ಜನಾರ್ದನ ಹಂದೆ, ವಿಜಯಲಕ್ಷ್ಮೀ ಬಿ. ಶೆಟ್ಟಿ, ಚಂದ್ರಶೇಖರ ನಾವಡ, ಸಂಜೀವ ಶೆಟ್ಟಿ, ನಿತ್ಯಾನಂದ ರಾವ್, ಸುಂದರ ಶೆಟ್ಟಿ ಬೆಟ್ಟಂಪಾಡಿ, ಚಂದ್ರಶೇಖರ ಮಯ್ಯ, ಪಿ.ಬಿ. ಹರೀಶ್ ರೈ, ಬಿ. ಸತೀಶ್ ರೈ ಮತ್ತಿತರರು ಉಪಸ್ಥಿತರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.