
ಮರಳುಗಾರಿಕೆಯಿಂದ ಭಯದ ವಾತಾವರಣ-ಸ್ಥಳೀಯ ಆಳಲು: ಪ್ರತಿಭಟನೆ
ಮಂಗಳೂರು: ಉಳ್ಳಾಲ ತಾಲೂಕಿನ ಹರೇಕಳ ಮತ್ತು ಅಂಬ್ಲಮೊಗರು ಗ್ರಾಮಳ ವ್ಯಾಪ್ತಿಗೊಳಪಡುವ ಕೊಟ್ಟಾರ ಕುದ್ರು, ಗಟ್ಟಿಕುದ್ರು ದ್ವೀಪಗಳಲ್ಲಿ ಅಕ್ರಮ ಮರಳುಗಾರಿಕೆಯಿಂದ ಸ್ಥಳೀಯರ ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಮಾತ್ರವಲ್ಲದೆ, ಉಭಯ ದ್ವೀಪಗಳು ಕೊಚ್ಚಿ ಹೋಗುವ ಭೀತಿ ಎದುರಾಗಿದೆ ಎಂದು ಓಸ್ವಾಲ್ಡ್ ಫುರ್ಟಾಡೋ ಆತಂಕ ವ್ಯಕ್ತಪಡಿಸಿದ್ದಾರೆ.
ಉಭಯ ದ್ವೀಪಗಳ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರೂ ಆಗಿರುವ ಅವರು, ಸಮಿತಿ ವತಿಯಿಂದ ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿ ಎದುರು ಮಂಗಳವಾರ ಆಯೋಜಿಸಲಾದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಮಾತನಾಡಿದರು.
ಸುಮಾರು 40 ರಷ್ಟು ಕುಟುಂಬಗಳು ಈ ದ್ವೀಪಗಳಲ್ಲಿ ತಲೆಮಾರುಗಳಿಂದ ವಾಸವಾಗಿದ್ದು, ಈಗಾಗಲೇ ಅಕ್ರಮ ಮರಳುಗಾರಿಕೆಯಿಂದ ದ್ವೀಪಗಳ ಅರ್ಧ ಭಾಗವೇ ಮಾಯವಾಗಿದೆ. ಅನುಮತಿ ಇಲ್ಲದೆ ನಡೆಯುತ್ತಿರುವ ಮರಳುಗಾರಿಕೆಯನ್ನು ನಿಲ್ಲಿಸಿ ಸ್ಥಳೀಯರನ್ನು ಭಯಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಉಳಿಯ ದ್ವೀಪದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಹೋರಾಟದ ಮೂಲಕ ನಿಲ್ಲಿಸುವ ಕಾರ್ಯ ಆಗಿದ್ದು, ಇದೀಗ ಹರೇಕಳದ ಉಭಯ ದ್ವೀಪಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರನ್ನು ಬೆನ್ನಟ್ಟಿ ತಡೆಯುವ ಕೆಲಸ ಹೋರಾಟದ ಮೂಲಕ ನಡೆಯಬೇಕು. ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸುತ್ತಿರುವ ಶಕ್ತಿಗಳನ್ನು ಬಯಲಿಗೆಳೆಯಲು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೋ ಮಾತನಾಡಿ, ಮರಳು ದಂಧೆಕೋರರು ಅಲ್ಲಲ್ಲಿ ತಮ್ಮ ಬಿಸ್ನೆಸ್ ನಡೆಸುತ್ತಿದ್ದರೆ, ಸ್ಥಳೀಯ ನಾಗರಿಕರು ನ್ಯಾಯಕ್ಕಾಗಿ ಪ್ರತಿಭಟನೆಗಳನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅಕ್ರಮ ಮರಳುಗಾರಿಕೆ ನಡೆಸುವವರು ದಂಧೆಕೋರರು ಮಾತ್ರವಲ್ಲ. ಅವರು ದರೋಡೆಕೋರರಾಗಿದ್ದು, ಅವರಿಗೆ ಯಾರ ಅನುಮತಿಯೂ ಬೇಕಾಗಿಲ್ಲ. ಉಳಿಯದಲ್ಲಿ ಬೇರು ಬಿಟ್ಟಿದ್ದ ಈ ದಂಧೆಕೋರರು ಇದೀಗ ಕೊಟ್ಟಾರಿ ಕುದ್ರು ಹಾಗೂ ಗಟ್ಟಿ ಕುದ್ರುವಿನಲ್ಲಿ ತಮ್ಮ ಬಿಸ್ನೆಸ್ ಆರಂಭಿಸಿದ್ದಾರೆ. ಸಂಸದರು, ಶಾಸಕರು ಜಿಲ್ಲೆಯಲ್ಲಿದ್ದರೂ ಸ್ಥಳೀಯರ ಸಮಸ್ಯೆಗಳಿಗೆ ಮಾತ್ರ ಪರಿಹಾರ ಇಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.
ಡಿವೈಎಫ್‌ಐ ಮುಖಂಡ ಸಂತೋಷ್ ಕುಮಾರ್ ಬಜಾಲ್ ಮಾತನಾಡಿ, ಸ್ಥಳೀಯ ಶಾಸಕ ಹಾಗೂ ವಿಧಾನಸಭೆ ಸ್ಪೀಕರ್ರವರು ತಾನು ಉಸ್ತುವಾರಿ ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆಪ್ ಮೂಲಕ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಿದ್ದಾಗಿ ಹೇಳುತ್ತಾರೆ. ಈಗ ಅವರದ್ದೇ ಸರಕಾರವಿದ್ದರೂ ಯಾಕೆ ಈ ಅಕ್ರಮ ಮರಳುಗಾರಿಕೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡವನ್ನು ಹೆಚ್ಚಿಸಬಾರದು ಎನ್ನುತ್ತಾರೆ. ಹಾಗಾದರೆ ಜನರ ಆತಂಕ, ಒತ್ತಡವನ್ನು ನಿವಾರಿಸುವವರು ಯಾರು, ಜನರ ಬದುಕಿನ ಪ್ರಶ್ನೆಗೆ ಸ್ಪಂದಿಸುವ ಕೆಲಸ ಮಾಡುವವರು ಯಾರು ಎಂದು ಅವರು ಪ್ರಶ್ನಿಸಿದರು.
ಮಾಜಿ ಕಾರ್ಪೊರೇಟರ್, ನ್ಯಾಯವಾದಿ ಮರಿಯಮ್ಮ ಥಾಮಸ್ ಮಾತನಾಡಿ, ಕಳೆದ 20 ವರ್ಷಗಳಿಂದ ಸ್ಥಳೀಯರು ಇಲ್ಲಿನ ಅಕ್ರಮ ಮರಳುಗಾರಿಕೆ ಬಗ್ಗೆ ಮನವಿಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ೨೦೦೭ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಕೊಟ್ಟಾರಿಕುದ್ರುವಿನಲ್ಲಿ ಸ್ಕೌಟ್ಸ್ ಗೈಡ್ಸ್ ಫಲಕವನ್ನು ಸ್ಥಾಪಿಸಿದ್ದಾರೆ. ಆದರೆ ಅಕ್ರಮ ಮರಳುಗಾರಿಕೆ ನಡೆಸುವವರು ಹಾಡು ಹಗಲಲ್ಲೇ ಅಲ್ಲಿ ತಮ್ಮ ದಂಧೆ ನಡೆಸುತ್ತಿದ್ದು, ವಿರೋಧ ವ್ಯಕ್ತಪಡಿಸುವ ನಾಗರಿಕರಿಗೆ ಜೀವ ಬೆದರಿಕೆ ಒಡ್ಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀತಾ ಡಿಸೋಜಾ, ಸ್ಥಳೀಯರಾದ ಕಿಶೋರ್ ಡಿಸೋಜಾ, ನೆಲ್ಸನ್, ಸಾಮಾಜಿಕ ಹೋರಾಟಗಾರರಾದ ಅಶುಂತ, ಯೋಗೀಶ್ ಜಪ್ಪಿನಮೊಗರು, ಇನ್ನಿತರರು ಉಪಸ್ಥಿತರಿದ್ದರು.
ಪ್ರತಿಭಟನಾ ಪ್ರದರ್ಶನಕ್ಕೂ ಮೊದಲು ಸೈಂಟ್ ಆ?ಯಗ್ನೆಸ್ ಜಂಕ್ಷನ್ನಿಂದ ಮಲ್ಲಿಕಟ್ಟೆಯವರೆಗೆ ಮೆರವಣಿಗೆ ನಡೆಯಿತು.
ಕೊಟ್ಟಾರಿ ಕುದ್ರು, ಗಟ್ಟಿ ಕುದ್ರುವಿನ ನಾಗರಿಕರ ಹೋರಾಟದಲ್ಲಿ ಜನಪರ ಸಂಘಟನೆಗಳು ಜತೆಯಾಗಿದ್ದು, ಅಕ್ರಮ ಮರಳುಗಾರಿಕೆ ನಿಲ್ಲುವವರೆಗೆ ಹೋರಾಟ ಮುಂದುವರಿಯಲಿದೆ. ಮರಳು ದಂಧೆಕೋರರನ್ನು ಗೂಂಡಾ ಕಾಯ್ದೆಗೊಳಪಡಿಸಿ ಗಡಿಪಾರು ಮಾಡಬೇಕು. ಆ ಮೂಲ ದ್ವೀಪವಾಸಿಗಳ ಬದುಕು ರಕ್ಷಿಸಬೇಕು ಹಾಗೂ ದ್ವೀಪಗಳನ್ನು ಉಳಿಸಬೇಕು ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.