
ರಾ.ಹೆ.ಕಾಮಗಾರಿ: ಮಳೆಗಾಲದಲ್ಲಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ: ತಹಶೀಲ್ದಾರ್ ತಾಕೀತು
ಬಂಟ್ವಾಳ: ಕಳೆದ ಮಳೆಗಾಲದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಹಿತ ಹಲವು ಭಾಗಗಳಲ್ಲಿ ರಸ್ತೆ ಕಾಮಗಾರಿಯ ಅವ್ಯವಸ್ಥೆಗಳಿಂದ ತೊಂದರೆ ಅನುಭವಿಸಬೇಕಾಗಿತ್ತು. ಈ ಮಳೆಗಾಲದಲ್ಲಿ ಅಂತಹ ಸನ್ನಿವೇಶ ಮರುಕಳಿಸಬಾರದೆಂಬ ಎಂಬ ನಿಟ್ಟಿನಲ್ಲಿ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರ ಪ್ರತಿನಿಧಿಯನ್ನು ಕರೆಸಿ ಸೂಚನೆ ಹಾಗೂ ಎಚ್ಚರಿಕೆಯನ್ನು ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್ ನೀಡಿದ್ದಾರೆ.
ಶುಕ್ರವಾರ ಬಂಟ್ವಾಳ ತಾಲೂಕು ಪಂಚಾಯಿತಿನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಮುಂಗಾರು ಮುನ್ನೆಚ್ಚರಿಕೆ ಕುರಿತು ಪಿಡಿಓಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರೊಯಿಂದ ಮಳೆಗಾಲದಲ್ಲಿ ಅಗಬಹುದಾದ ಸಮಸ್ಯೆಗಳ ಚರ್ಚೆಯ
ವೇಳೆ ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ತಮ್ಮ ಭಾಗದ ಸಮಸ್ಯೆಗಳನ್ನು ವಿವರಿಸಿದರು.
ಗೋಳ್ತಮಜಲು ಗ್ರಾಪಂ ಕಟ್ಟಡವಿರುವ ಭಾಗ ಕುಸಿತದ ಸ್ಥಿತಿಯಲ್ಲಿದ್ದು, ಅದಕ್ಕೆ ತಡೆಗೋಡೆಯನ್ನು ಹೈವೇ ಕಂಪನಿ ನಿರ್ಮಿಸಿಕೊಡಬೇಕು ಎಂದು ಪಿಡಿಓ ವಿಜಯಶಂಕರ ಆಳ್ವ ಹೇಳಿದರು.
ಈ ಸಂದರ್ಭ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರ ಪ್ರತಿನಿಧಿಯನ್ನು ಸಭೆಗೆ ಕರೆಸಿ ಫ್ಲೈಓವರ್ ನಲ್ಲಿ ರಸ್ತೆಗೆ ನೀರು ಹೊರಚೆಲ್ಲದಂತೆ ಗಮನಹರಿಸಬೇಕು. ಕಾಮಗಾರಿ ಆಗುವ ಜಾಗದಲ್ಲಿ ಜನರಿಗೆ ತೊಂದರೆ ಆಗದಂತೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಸೂಚಿಸಿದರು.
ಆರು ತಿಂಗಳೊಳಗೆ ಹೆದ್ದಾರಿ ಕೆಲಸಗಳು ಪೂರ್ಣಗೊಳ್ಳಲಿದೆ, ಕಲ್ಲಡ್ಕ ಫ್ಲೈಓವರ್ ಮುಂದಿನ ತಿಂಗಳು ಸಂಚಾರಕ್ಕೆ ತೆರವುಗೊಳ್ಳಲಿದೆ ಎಂದು ನಿರ್ಮಾಣ ಕಂಪನಿ ಪ್ರತಿನಿಧಿ ಸಭೆಗೆ ಮಾಹಿತಿ ನೀಡಿದರು. ಹೆದ್ದಾರಿ ಕಾಮಗಾರಿ ನಡೆಯುವ ಪೆರಾಜೆಯಲ್ಲಿ ಈಗಾಗಲೇ ಕಂಪೆನಿ ಚರಂಡಿಗಳನ್ನು ನಿರ್ಮಿಸಿದೆಯಾದರೂ ಅದರಲ್ಲಿನ ಹೂಳು ತುಂಬಿ, ಮಳೆಗಾಲದ ಆರಂಭದ ದಿನಗಳಲ್ಲಿ ನೀರು ಹರಿಯಲು ಸಾಧ್ಯವಾಗದೆ ಹೆದ್ದಾರಿಯ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯನ್ನು ಉಂಟು ಮಾಡುದರಿಂದ ಹೂಳೆತ್ತುವಂತೆ ತಹಶೀಲ್ದಾರ್ ಸೂಚಿಸಿದರು.
ಮೊದಲೇ ಕಾರ್ಯೋನ್ಮಖರಾಗಿ:
ಮಳೆ ಬಂದ ಮೇಲೆ ಕಾರ್ಯಪ್ರವೃತ್ತರಾಗುವ ಬದಲು ಸಮಸ್ಯೆಗಳೇ ಬಾರದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ತಹಸೀಲ್ದಾರ್ ಡಿ. ಅರ್ಚನಾ ಭಟ್ ಅಧಿಕಾರಿಗಳಿಗೆ ಎಚ್ಚರಿಸಿದರು. ಮೇ.೨ರೊಳಗೆ ಅಪಾಯಕಾರಿ ಜಾಗ ಗುರುತಿಸಿ ವರದಿ ನೀಡಬೇಕು, ಅನಾಹುತಗಳು ಆಗದೇ ಇರುವಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಮಾತನಾಡಿ ಸೂಚನೆಯನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು ಪಾಲಿಸಬೇಕು ಮಳೆಗಾಲದ ಸಂದರ್ಭ ಸಮಸ್ಯೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ನದಿ ತೀರದಲ್ಲಿ ಎಚ್ಚರ:
ನೇತ್ರಾವತಿ ನದಿ ಸಹಿತ ತಾಲೂಕಿನ ನದಿ, ಹಳ್ಳಗಳ ಸಮೀಪ ಸಾರ್ವಜನಿಕರು ಅಪಾಯಕಾರಿ ಜಾಗಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಸ್ಥಳೀಯಾಡಳಿತಗಳು ಕೈಗೊಳ್ಳು ಪುರಸಭಾಧಿಕಾರಿ ಹಾಗೂ ಗ್ರಾಪಂ ಪಿಡಿಓಗಳಿಗೆ ತಹಸೀಲ್ದಾರ್ ಸೂಚನೆ ನೀಡಿದರು. ವಿಶೇಷವಾಗಿ ಪುರಸಭಾ ವ್ಯಾಪ್ತಿಯ ಪ್ರಮುಖ ಸ್ಥಳಗಳು ನಾವೂರು, ಅಜಿಲಮೊಗರು ಮೊದಲಾದ ಜಾಗಗಳಲ್ಲಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ಹಾಕಬೇಕು ಎಂದರು.
ತಾಲೂಕಿನಲ್ಲಿ ಕಾಳಜಿ ಕೇಂದ್ರಗಳ ಕುರಿತು ವರದಿ ಪಡೆದು ಅವುಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸೂಚಿಸಿದ ತಹಸೀಲ್ದಾರ್, ನೆರೆ ಬಂದಾಗ ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು, ಈಜುಗಾರರು, ಮುಳುಗುತಜ್ಞರೊಂದಿಗೆ ಈಗಲೇ ಮಾತನಾಡಿ, ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಕಳೆದ ವರ್ಷ ನೆರೆ ಬಂದ ವೇಳೆ ತೊಂದರೆ ಅನುಭವಿಸಿದ ಗೂಡಿನಬಳಿ ಕುಟುಂಬಗಳನ್ನು ಮೊದಲೇ ಸ್ಥಳಾಂತರ ಮಾಡಲು ಸೂಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಲೆ, ಅಂಗನವಾಡಿಗಳ ಸಮೀಪ ಎಚ್ಚರ:
ಶಾಲೆಗಳು, ಅಂಗನವಾಡಿ ಕಟ್ಟಡಗಳ ಸಮೀಪ ಕಾಲುಸಂಕವೇ ಮೊದಲಾದ ಮಕ್ಕಳು ಸಾಗಲು ಕಷ್ಟವಾಗುವ ಅಪಾಯಕಾರಿ ಜಾಗಗಳನ್ನು ಗುರುತಿಸಿಕೊಳ್ಳಬೇಕು ಎಂದವರು ಸಂಬಂಧಪಟ್ಟ ಇಲಾಖೆಗಳಿಗೆ ಎಚ್ಚರಿಸಿದರು. ನೀರಲ್ಲಿ ಮುಳುಗಡೆಯಾಗುವ ಕಾಲುಸಂಕಗಳನ್ನು ಗುರುತಿಸಿ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದರು.
ಫ್ಲೆಕ್ಸ್, ಬ್ಯಾನರ್ ತೆರವಿಗೆ ಸೂಚನೆ:
ಮಳೆ, ಗಾಳಿ ಸಂದರ್ಭ ಹೆದ್ದಾರಿ ಬದಿಯಲ್ಲಿ ಫ್ಲೆಕ್ಸ್, ಬ್ಯಾನರ್ ಬಂಟಿಂಗ್ ಗಳು ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಸಂಚಾರಕ್ಕೆ ಅಪಾಯಕಾರಿಯಾಗುವಂಥ ಸನ್ನಿವೇಶದಲ್ಲಿ ಇರುವುದು ಗಮನಕ್ಕೆ ಬಂದಿದ್ದು, ಡಿಸಿಯವರು ಈಗಾಗಲೇ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇವುಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಹೆದ್ದಾರಿ ಬದಿಯ ಪಂಚಾಯತ್ ಪಿಡಿಒಗಳು ಹಾಗು ಪುರಸಭಾಧಿಕಾರಿಗಳಿಗೆ ಸೂಚಿಸಿದರು. ಗಾಳಿ ಮಳೆಗೆ ಹೆದ್ದಾರಿಗೆ ಬಿದ್ದು ವಾಹನ ಸವಾರರಿಗೆ ಅಪಾಯವಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅವರು ನೀಡಿದರು.
ಕಲ್ಲು ಕ್ವಾರಿ ಕುರಿತು ಗಮನವಿರಲಿ:
ಸಜೀಪ, ಕಲ್ಲಗುಂಡಿ, ಬೆಂಜನಪದವು ಸಹಿತ ತಾಲೂಕಿನ ಹಲವೆಡೆ ತೆರೆದ ಕ್ವಾರಿಗಳು ಹಾಗೂ ಕಾಮಗಾರಿ ನಿಲ್ಲಿಸಿದ ಕ್ವಾರಿಗಳು ಅಪಾಯದ ಸ್ಥಿತಿಯಲ್ಲಿದ್ದರೆ, ಅವುಗಳನ್ನು ಗುರುತಿಸಿ, ಗುಂಡಿ ಮುಚ್ಚಿಸಲು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ತಹಸೀಲ್ದಾರ್ ನೀಡಿದ್ದಾರೆ. ಈ ಕುರಿತು ಪಿಡಿಓಗಳು ಕೂಡಲೇ ಕ್ರಮ ಕೈಗೊಂಡು ವರದಿ ನೀಡುವಂತೆ ತಿಳಿಸಿದರು.ಗುಂಡಿಗಳನ್ನು ಮುಚ್ಚಿಸಲು ಮಾಲೀಕರಿಗೆ ನೋಟಿಸ್ ನೀಡಿ ಮತ್ತು ಅಪಾಯಗಳಾದರೆ ಅವರ ಮೇಲೆ ಕಾನೂನು ಕ್ರಮ ಜರಗಿಸಿ ಎಂದರು.
ಮಣ್ಣು ತೆಗೆಯುವ ವೇಳೆ ಗಮನಿಸಿ:
ನಿರ್ಮಾಣ ಕಾಮಗಾರಿ ಸಂದರ್ಭ, ಮನೆ ಅಥವಾ ನೀರಿನ ಟ್ಯಾಂಕ್ ಇದ್ದಲ್ಲಿ ಮಣ್ಣು ಅಗೆಯುವ ವೇಳೆ ಗಮನಿಸಿಕೊಳ್ಳಬೇಕು, ಮಣ್ಣು ತೆಗೆಯಲು ಅನುಮತಿ ನೀಡುವ ವೇಳೆ ಜಾಗೃತಿ ವಹಿಸಿ, ಅನೇಕ ಕಡೆಗಳಲ್ಲಿ ಮನೆ ಬೀಳುವ ಸ್ಥಿತಿಯಲ್ಲಿದೆ, ಇನ್ನು ಮುಂದೆ ಅಂಥ ಸಮಸ್ಯೆಗಳಿಗೆ ಅವಕಾಶ ನೀಡಬೇಡಿ ಎಂದರು