
ಕರಾವಳಿಯಲ್ಲಿ ಶುಭ ಶುಕ್ರವಾರ ಆಚರಣೆ
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಉಪವಾಸ, ಧ್ಯಾನದೊಂದಿಗೆ ಶುಭ ಶುಕ್ರವಾರವನ್ನು ಆಚರಿಸಲಾಯಿತು.
ಮಂಗಳೂರಿನ ಮಿಲಾಗ್ರಿಸ ಚರ್ಚ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ನಡೆದ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಬಂಧುಗಳು ಭಾಗವಹಿಸಿದ್ದರು.
ಉಡುಪಿ ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ)ವನ್ನು ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಬಿಷಪ್ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿ ನೆರವೇರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ. ಪ್ರದೀಪ್ ಕಾರ್ಡೊಜಾ, ಪೋಪ್ ಅವರ ಭಾರತೀಯ ರಾಯಭಾರಿಗಳ ಕಾರ್ಯದರ್ಶಿ ವಂ. ಆಲ್ಬರ್ಟೋ ನಪ್ಲಿತಾನೋ ಹಾಗೂ ಬೊಲಿವಿಯಾ ರಾಯಭಾರಿಗಳ ಕಾರ್ಯದರ್ಶಿ ವಂ. ಐವನ್ ಮಾರ್ಟಿಸ್, ಕಟಪಾಡಿ ಹೋಲಿ ಕ್ರೊಸ್ ಸಂಸ್ಥೆಯ ನಿರ್ದೇಶಕ ವಂ. ರೋನ್ಸನ್ ಡಿ’ಸೋಜಾ ಇದ್ದರು.
ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಗುಡ್ ಫ್ರೈಡೆ ಸಂದೇಶ ನೀಡಿ, ಶುಭ ಶುಕ್ರವಾರ ಏಸು ಮನುಕುಲದ ವಿಮೋಚನೆಗಾಗಿ ತನ್ನಾತ್ಮವನ್ನು ಪಿತನ ಕೈಗೊಪ್ಪಿಸಿದ ದಿನ. ಕ್ರಿಸ್ತನ ತ್ಯಾಗದ ಮಹತ್ವವನ್ನು ಧ್ಯಾನಿಸುವ ಪವಿತ್ರ ದಿನ. ಶುಭ ಶುಕ್ರವಾರ ನಿಮ್ಮ ಬದುಕಿನಲ್ಲಿ ಪ್ರೀತಿ, ಕ್ಷಮೆ ಮತ್ತು ತ್ಯಾಗದ ಅರ್ಥ ಅರಿಯಲು ಸಹಾಯ ಮಾಡುತ್ತದೆ ಎಂದರು.
ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ಆಯಾ ಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರ ಶುಕ್ರವಾರದ ವಿಧಿವಿಧಾನಗಳು ನಡೆದವು.