
ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಂಗಳೂರು ಬಿಟ್ಟು ಹೋಗಲು ಹಿಂಜರಿಯುತ್ತಿದ್ದಾರೆ: ಬಿ.ವೈ. ವಿಜಯೇಂದ್ರ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯಾ? ಅಥವಾ ಬೆಂಗಳೂರಿಗೆ ಮುಖ್ಯಮಂತ್ರಿಯಾ? ಎಂಬ ಅನುಮಾನ ಬರುತ್ತಿದೆ. ಅವರು ಬೆಂಗಳೂರನ್ನು ಬಿಟ್ಟು ಬಂದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಕುರ್ಚಿ ಕಸಿಯುವ ಭೀತಿಯಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರು ಬಿಟ್ಟು ಹೊರಗಡೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಮತ್ತು ಮುಸ್ಲಿಂ ಓಲೈಕೆ ವಿರೋಧಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡ ಪ್ರಥಮ ಹಂತದ ಜನಾಕ್ರೋಶ ಯಾತ್ರೆ ಅಂಗವಾಗಿ ಮಂಗಳೂರಿನಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ಆಡಳಿತ ನೋಡಿದರೆ ಅವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿಯಾ ಎಂಬ ಅನುಮಾನ ಬರುತ್ತಿದೆ. ರಾಜ್ಯ ಪ್ರವಾಸಕ್ಕೆ ತೆರಳಿದರೆ ತನ್ನ ಸಿಎಂ ಕುರ್ಚಿಯನ್ನು ಡಿಕೆಶಿ ಕಸಿದುಬಿಡುವ ಭೀತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಇನ್ನೊಂದೆಡೆ ರಾಜ್ಯ ಪ್ರವಾಸ ನಡೆಸಿದರೆ ಜನತೆ ತಲೆ ಬಗ್ಗಿಸಿ ಎಲ್ಲಿ ಬಡಿಗೆಯಲ್ಲಿ ಹೊಡೆಯುತ್ತಾರೋ ಎಂಬ ಆತಂಕ ಸಿಎಂ ಸಿದ್ದರಾಮಯ್ಯ ಅವರನ್ನು ಕಾಡಿದಂತಿದೆ ಎಂದು ವಿಜಯೇಂದ್ರ ಲೇವಡಿ ಮಾಡಿದರು.
ಯಾವುದೇ ಶಾಸಕರಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳುತ್ತಿದ್ದಾರೆ. ಶಾಸಕ ಬಿ.ಆರ್.ಪಾಟೀಲ್ ಅವರು ಗ್ಯಾರಂಟಿ ಯೋಜನೆಯಿಂದ ಅನುದಾನ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಆರ್.ವಿ.ದೇಶಪಾಂಡೆ ಅವರು ಶಾಸಕನಾಗಿ ಎರಡು ವರ್ಷವಾದರೂ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ೫೦ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆ ಅಗಿದೆ. ಮಾತೆತ್ತಿದರೆ ಕೇಂದ್ರ ಸರ್ಕಾರವನ್ನು ದೂರುತ್ತಾರೆ, ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸಂಘರ್ಷದ ಹಾದಿ ತುಳಿದಿದ್ದೀರಿ, ಕರ್ನಾಟಕದಲ್ಲಿ ಇದು ಜನವಿರೋಧಿ ಮತ್ತು ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರವಾಗಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ ಎಂದು ಅವರು ಆರೋಪಿಸಿದರು.
ದೇಶದ್ರೋಹಿಗೆ ಗುಂಡಿಕ್ಕುತ್ತಿದ್ದೆವು:
ರಾಜ್ಯದಲ್ಲಿ ಹಿಂದೂಗಳಿಗೆ ಅಪಮಾನ ಮಾಡುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿಗೆ ಮುತ್ತಿಡುತ್ತಾನೆ. ಯಡಿಯೂರಪ್ಪ ಸರ್ಕಾರ ಇದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ ಗುಂಡಿಕ್ಕುತ್ತಿದ್ದೆವು. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಸಿದ್ದರಾಮಯ್ಯ ಬಜೆಟ್ನಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡುತ್ತಿದ್ದಾರೆ. ಇಂತಹ ಹಿಂದೂ ವಿರೋಧಿ ಸರ್ಕಾರವನ್ನು ಬಿಜೆಪಿ ಕಾರ್ಯಕರ್ತರು ಕಿತ್ತು ಹಾಕುತ್ತಾರೆ ಎಂದು ವಿಜಯೇಂದ್ರ ಗುಡುಗಿದರು.
ತಾರ್ಕಿಕ ಅಂತ್ಯ ವರೆಗೆ ಹೋರಾಟ:
ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ಸಿದ್ದು, ಡಿಕೆಶಿ ಅವರದ್ದು ಅತ್ಯಂತ ಭ್ರಷ್ಟ ಸರ್ಕಾರ. ಅಲ್ಲಾವುದ್ದೀನ್ ಖಿಲ್ಜಿ, ಮೊಹಮ್ಮದ್ ಬಿ ನ್ ತುಘಲಕ್ಗಿಂತ ಭ್ರಷ್ಟ ಸರ್ಕಾರ ಇದಾಗಿದೆ. ಸಿದ್ದರಾಮಯ್ಯ ಅವರು ಜನರ ಮೇಲೆ ಸವಾರಿ ನಡೆಸುತ್ತಿದ್ದಾರೆ. ಬಿಜೆಪಿಯ ಜನಾಕ್ರೋಶ ಪಾದಯಾತ್ರೆಯನ್ನು ಟೀಕಿಸುವ ಸಿದ್ದರಾಮಯ್ಯ, ಕಾಂಗ್ರೆಸಿಗರು ಹಿಂದೆ ಯಾಕೆ ಬಳ್ಳಾರಿ ಪಾದಯಾತ್ರೆ ನಡೆಸಿದ್ದರು ಎಂದು ಪ್ರಶ್ನಿಸಿದರು. ಸಿದ್ದು ಸರ್ಕಾರದ ವಿರುದ್ಧ ತಾರ್ಕಿಕ ಅಂತ್ಯ ವರೆಗೆ ಈ ಹೋರಾಟ ಮುಂದುವರಿಯಲಿದೆ ಎಂದರು.