
ಬೀಸಿದ ಗಾಳಿಗೆ ಧರೆಗುರುಳಿದ ಮರಗಳು, ಜಖಂಗೊಂಡ ಕಾರು, ಮನೆ
Tuesday, April 22, 2025
ಮೂಡುಬಿದಿರೆ: ಮಂಗಳವಾರ ಸಂಜೆ ತಾಲೂಕಿನಲ್ಲಿ ಬೀಸಿದ ಗಾಳಿಗೆ ಬಿರಾವು ಗಾಜಿಗಾರ ಪಲ್ಕೆ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಪವಾಡಸದೃಶ ಪಾರಾಗಿದ್ದು ಕಾರು ಜಖಂಗೊಂಡಿದೆ.
ಮೂಡುಬಿದಿರೆ- ಬಂಟ್ವಾಳ ರಸ್ತೆಯಲ್ಲಿ ಘಟನೆ ನಡೆದು ಗಾಳಿಗೆ ವಿದ್ಯುತ್ ಕಂಬ ಕೂಡ ಉರುಳಿ ಬಿದ್ದಿದೆ. ಮಧ್ಯೆ ಕೆಲ ತಾಸು ಸಂಚಾರ ಸ್ಥಗಿತಗೊಂಡಿದ್ದು ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಸಾರ್ವಜನಿಕರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು. ಮಾರೂರು ಶಾಲೆ ಬಳಿ ರಜಾಕ್ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ.
ಮನೆಯಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. ಇದೇ ಗ್ರಾಮದ ಗುಡ್ಡಲಂಗಡಿಯ ದೈವಸ್ಥಾನದ ಬಳಿ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಇದೇ ಪರಿಸರದ ದಲಿತ ಕಾಲನಿ ಎಂಬಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.