
ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆ ಅಗತ್ಯ: ಬಲರಾಮ ಆಚಾರ್ಯ
Tuesday, April 29, 2025
ಪುತ್ತೂರು: ಪ್ರಸ್ತುತ ದಿನಮಾನದಲ್ಲಿ ಕೌಶಲ್ಯಗಳು ಬಹುಮುಖ್ಯವಾಗಿದ್ದು, ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆಯ ಅಗತ್ಯವಿದೆ, ವಿದ್ಯಾರ್ಥಿಗಳು ಕೇವಲ ತರಗತಿ ಚಟುವಟಿಗಳಲ್ಲಿ ಮಾತ್ರ ತೊಡಗಿಕೊಳ್ಳದೆ ಇಂತಹ ಫೆಸ್ಟ್‌ಗಳನ್ನು ಆಯೋಜನೆ ಮಾಡಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಪ್ರತಿಯೊಬ್ಬರಲ್ಲೂ ಕೌಶಲ್ಯಗಳ ಅಭಿವೃದ್ಧಿ ಸಾಧ್ಯ ಎಂದು ಪುತ್ತೂರಿನ ಜಿಲ್ ಸಮೂಹ ಸಂಸ್ಥೆಗಳ ಎಂಡಿ ಬಲರಾಮ ಆಚಾರ್ಯ ಹೇಳಿದರು.
ಅವರು ಏ.28 ರಂದು ಸಂತ ಫಿಲೋಮಿನ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿಭಾಗಗಳ ಫೆಸ್ಟ್ ‘ಫಿಲೋ ಕಾರ್ನಿವಾಲ್-2025’ವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ತೊಡಗಿಕೊಳ್ಳದೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ರಂಗದಲ್ಲಿ ಸಮಾನಾಂತರವಾಗಿ ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಶ್ರೀಮಣಿ, ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ವಿಪಿನ್ ನಾಯ್ಕ್, ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಗಣೇಶ್ ಭಟ್ ಹಾಗೂ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಮುಖ್ಯಸ್ಥ ಹರ್ಷಿತ್ ಉಪಸ್ಥಿತರಿದ್ದರು. ಎಲ್ಲಾ ಸ್ನಾತಕೋತ್ತರ ಕಾರ್ಯಕ್ರಮಗಳ ಉಪಾನ್ಯಾಸಕರು ಹಾಗೂ ವಿವಿಧ ಕಾಲೇಜುಗಳ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಮುಖ್ಯಸ್ಥ ಹರ್ಷಿತ್ ಸ್ವಾಗತಿಸಿ, ತನ್ವಿ ರೈ ಮತ್ತು ಬಳಗದವರು ಪ್ರಾರ್ಥಿಸಿ, ಸಂಚನ ವಂದಿಸಿದರು. ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.