
ಅವಕಾಶಗಳ ನಿರ್ಲಕ್ಷ್ಯ ಬೇಡ: ಶರಣ್ ಚಿಲಿಂಬಿ
ಪುತ್ತೂರು: ವಿದ್ಯಾರ್ಥಿಗಳಿಗೆ ಪಾಠ ಜತೆಗೆ ಸ್ಪರ್ಧೆಗಳೂ ಸಾಕಷ್ಟು ಕಲಿಕೆಗೆ ಅವಕಾಶ ಮಾಡಿಕೊಡುತ್ತವೆ. ಸ್ಪರ್ಧೆಗಳಲ್ಲಿ ಭಾಗಿಯಾಗುವ ಮಕ್ಕಳು ಇತರರಿಗಿಂತ ಒಂದು ಹಜ್ಜೆ ಮುಂದೆ ಇರುತ್ತಾರೆ. ಹಾಗಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಹೆಚ್ಚು ಮುಖ್ಯವಾಗುತ್ತದೆ. ಹಾಗಾಗಿ ಬಂದ ಅವಕಾಶಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಸಂತಫಿಲೋಮಿನಾ ಕಾಲೇಜು ವಾತಾವರಣ ಸಕಾರಾತ್ಮಕವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ ಎಂದು ತುಳು ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ಹೇಳಿದರು.
ಅವರು ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗ ಮತ್ತು ಪಿನ್ಯಾಕಲ್ ಐಟಿಕ್ಲಬ್ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್ ಪಿನ್ಯಾಕಲ್-೨೫ಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ವಂ. ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಪಡೆಯಬೇಕಾದರೆ ವಿದ್ಯಾಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಸೃಜನಶೀಲತೆ ನಿಮ್ಮ ಬದುಕಿನಲ್ಲಿ ಅತೀ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕ ಅತಿ ವಂ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಸಿದ್ಧಾಂತ ಮತ್ತು ಪ್ರಾಯೋಗಿಕತೆ ಎರಡೂ ಮುಖ್ಯವಾದ ಜ್ಞಾನ. ತರಗತಿ ಮತ್ತು ಸ್ಪರ್ಧೆಗಳಿಂದ ಈ ಅನುಭವ ನಿಮ್ಮದಾಗುವುದು. ಅದಕ್ಕಾಗಿ ಕಲಿಕೆ ಮತ್ತು ಸ್ಪರ್ಧೆಗಳಿಗೆ ಪ್ರಾಮುಖ್ಯತೆ ನೀಡಿ ಎಂದರು.
2023-24ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಬಿಸಿಎ ಪದವಿ ವಿಭಾಗದಲ್ಲಿ ನಾಲ್ಕನೇ ರ‍್ಯಾಂಕ್ ಪಡೆದ ಚೈತಾಲಿ ಎಸ್. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಣಕವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಸನ್ಮಾನ ಭಾಷಣ ಮಾಡಿದರು.
ಸುರಭಿ ಮತ್ತು ಬಳಗ ಪ್ರಾರ್ಥಿಸಿದರು. ಐಟಿಫೆಸ್ಟ್‌ನ ವಿದ್ಯಾರ್ಥಿ ಸಂಯೋಜಕ ಲೆನಿನ್ ಸ್ವಾಗತಿಸಿದರು. ಮತ್ತೋರ್ವ ವಿದ್ಯಾರ್ಥಿ ಸಂಯೋಜಕ ಹವ್ಯಾಸ್ ಯು. ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಸೃಜನಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣಕವಿಜ್ಞಾನ ವಿಭಾಗದ ಡೀನ್ ಡಾ. ವಿನಯಚಂದ್ರ ಹಾಗೂ ಪಿನ್ಯಾಕಲ್-25ರ ಸಂಯೋಜಕಿ ಡಾ. ಗೀತಾ ಪೂರ್ಣಿಮಾ ಕೆ. ಉಪಸ್ಥಿತರಿದ್ದರು.