
ಪಿಲಾರಿನ ಶ್ರೀ ಮಹಾಲಕ್ಷ್ಮಿ ಮಂದಿರದ 15ನೇ ಪ್ರತಿಷ್ಠಾ ವರ್ಧಂತ್ಯುತ್ಸವ
ಉಳ್ಳಾಲ: ಶ್ರೀ ಮಹಾಲಕ್ಷ್ಮಿ ಮಂದಿರದ 15ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪಿಲಾರಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮೇಗಿನ ಮನೆ ಪಿಲಾರು ಮೀನಾಕ್ಷಿ ಸೀತಾರಾಮ ಶೆಟ್ಟಿ ಉದ್ಘಾಟಿಸಿದರು. ಮೋಹನದಾಸ ಪರಮಹಂಸರು, ಮಾನವನ ಜೀವನ ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳಬೇಡಿ. ಇದ್ದಷ್ಟು ದಿನ ಪರೋಪಕಾರ ಮಾಡುವ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳುವಂತೆ ಸಂದೇಶ ನೀಡಿದರು.
ಮಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮಾನವೀಯತೆ ಹಾಗೂ ಸಮಾಜಕ್ಕಾಗಿ ಮಾಡಿದ ಸೇವೆ ಅನಂತಕಾಲ ಚಿರಸ್ಥಾಯಿಯಾಗಿ ಉಳಿಯುತ್ತದೆ. ಎಲ್ಲರ ಹೃದಯದಲ್ಲಿ ಇರುವ ಚೈತನ್ಯ ಒಂದೇ. ಆದ್ದರಿಂದ ಜಾತಿ, ಮತ, ಧರ್ಮಗಳನ್ನು ಮೀರಿ ಸಮುದಾಯಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅಲ್ಲದೇ, ಸಮಾಜದಲ್ಲಿ ಪ್ರಗತಿಪರ ಪರಿವರ್ತನೆಯನ್ನು ಪ್ರೇರೇಪಿಸುವತ್ತ ಗಮನ ಹರಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಧನಲಕ್ಷಿ ಗಟ್ಟಿ, ಮಕ್ಕಳಿಗೆ ಪೋಷಕರು ಸಂಸ್ಕಾರ ಕಲಿಸಬೇಕಾಗಿದೆ. ಧಾರ್ಮಿಕ ಸಭೆಗಳಿಗೆ ಮಕ್ಕಳನ್ನು ಕರೆದೊಯ್ದು ನಮ್ಮ ಸಂಸ್ಕೃತಿಯ ಪರಿಚಯ ಮಾಡಬೇಕಾಗಿದೆ ಎಂದರು.
ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಭಾರತಿ ಪಿಲಾರ್, ಎಲ್ಲರೂ ಒಂದೆಡೆ ಸೇರಿ ಭಜನೆ ಮಾಡಿದಾಗ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ ಹಾಗೂ ಸಾಮರಸ್ಯದ ವಾತಾವರಣ ನಿರ್ಮಾಣ ಆಗುತ್ತದೆ. ಎಲ್ಲಾ ಧರ್ಮಗಳ ಮೂಲ ಮಾನವೀಯತೆಯೇ ಆಗಿದೆ. ಒಬ್ಬ ವ್ಯಕ್ತಿ ಸಂಕಷ್ಟದಲ್ಲಿರುವಾಗ ಆತನ ಪ್ರಾಣರಕ್ಷಣೆ ಮುಖ್ಯವೇ ವಿನಃ ಜಾತಿಯಾಗಲೀ, ಧರ್ಮವಾಗಲೀ ಅಲ್ಲ. ಆದ್ದರಿಂದ ಮಾನವೀಯತೆ ಗುಣಗಳನ್ನು ಮೈಗೂಡಿಸಿ, ಸ್ವಸ್ಥ ಸಮಾಜ ನಿರ್ಮಾಣ ಮಾಡೋಣ ಎಂದರು.
ಬಿಜೆಪಿಯ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಕುಂಪಲ, ಮೆಸ್ಕಾಂನ ನಿತೇಶ್ ಹೊಸಗದ್ದೆ, ಪುರುಷೋತ್ತಮ ಖಂಚಿಲ, ಬೊಲ್ಮಗುತ್ತು ಆನಂದ ಶೆಟ್ಟಿ, ಕೆ.ಪಿ. ಸುರೇಶ್, ಪುರುಷೋತ್ತಮ ಕುಲಾಲ್, ಶಾಂತಪಾಲ್, ಸೂರಜ ಪೂಜಾರಿ, ಸುನಿಲ್ ಕುಂಪಲ, ಪುರುಷೋತ್ತಮ ಶೆಟ್ಟಿ, ದೇಲಂತಬೆಟ್ಟು, ದೀಪಕ್ ಪಿಲಾರ್, ರಾಜ ನಾಯಕ್, ಪರ್ವಿನ್ ಸಾಜಿದ್, ಮಂದಿರದ ಅಧ್ಯಕ್ಷ ರಮೇಶ್ ಗಟ್ಟಿ, ಮಂದಿರದ ಮಹಿಳಾ ಗೌರವಾಧ್ಯಕ್ಷ ಸವಿತಾ ದಿವಾಕರ್, ಮಹಿಳಾ ಅಧ್ಯಕ್ಷ ಶೋಭ ಪ್ರವೀಣ್ ಗಟ್ಟಿ ಉಪಸ್ಥಿತರಿದ್ದರು.
ಚಂದ್ರಶೇಖರ ಮಜಲ್ ಸ್ವಾಗತಿಸಿ, ಮಹಾಲಕ್ಷ್ಮಿ ಮಂದಿರದ ಗೌರವಾಧ್ಯಕ್ಷ ದಿವಾಕರ್ ಬಗಂಬಿಲ ವಂದಿಸಿದರು.