
ಸುಹಾಸ್ ಶೆಟಿ ಹತ್ಯೆಯಲ್ಲಿ ಪಿಎಫ್‌ಐ ‘ಟಾರ್ಗೆಟೆಡ್ ಕಿಲ್ಲಿಂಗ್’ ಮಾದರಿ: ಎನ್‌ಐಎ ತನಿಖೆಗೆ ವಿಹೆಚ್‌ಪಿ ಆಗ್ರಹ
ಮಂಗಳೂರು: ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ 50 ಲಕ್ಷ ರೂಪಾಯಿಗೂ ಅಧಿಕ ಹಣ ಫಂಡಿಂಗ್ ಆಗಿದೆ. ಪಿಎಫ್‌ಐ ನಡೆಸುತ್ತಿರುವ ‘ಟಾರ್ಗೆಟೆಡ್ ಕಿಲ್ಲಿಂಗ್’ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಈ ಹತ್ಯೆ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸಬೇಕು ಎಂದು ವಿಶ್ವಹಿಂದು ಪರಿಷತ್, ಬಜರಂಗದಳ ಹಾಗೂ ಹಿಂದು ಜಾಗರಣ ವೇದಿಕೆ ಆಗ್ರಹಿಸಿವೆ.
ಪ್ರಕರಣದಲ್ಲಿ ನೈಜ ಅಪರಾಧಿಗಳನ್ನು ಬಂಧಿಸಿದ್ದಾರೆಯೇ ಎಂಬ ಬಗ್ಗೆ ಸಂಶಯವಿದೆ. ಫಾಜಿಲ್ ಹತ್ಯೆಗೆ ಪ್ರತೀಕಾರವಾಗಿ ಮಾತ್ರ ಸುಹಾಸ್ ಹತ್ಯೆ ನಡೆಸಿಲ್ಲ. ಫಾಜಿಲ್ ಸಹೋದರ ಮಾತ್ರ ಕೊಲೆಗೆ ಸುಪಾರಿ ನೀಡಿಲ್ಲ. ಕೆಲ ದುಷ್ಟಶಕ್ತಿಗಳು ಸುಹಾಸ್ ಕೊಲೆಗೆ 50 ಲಕ್ಷ ರೂ. ಸಂಗ್ರಹಿಸಿರುವ ಮಾಹಿತಿಯಿದೆ. ಕುಡುಪುವಿನಲ್ಲಿ ಅಶ್ರಫ್ ಎಂಬಾತನ ಕೊಲೆ ನಡೆದ ಮೂರು ದಿನದಲ್ಲಿ ಪಿಎಫ್‌ಐ ಮಾದರಿಯಲ್ಲಿ ಈ ಕೊಲೆ ನಡೆಸಲಾಗಿದೆ. ಕೊಲೆ ನಡೆಸಿದ ಬಳಿಕ ಆರೋಪಿಗಳು ಸ್ಥಳದಿಂದ ತೆರಳಲು ಯಾವುದೇ ಆತುರ ಇರಲಿಲ್ಲ. ಸುಹಾಸ್ ಸಾವಿನ ಬಗ್ಗೆ ಖಾತ್ರಿಯಾದ ಬಳಿಕ ಆರೋಪಿಗಳು ಆರಾಮವಾಗಿ ಸ್ಥಳದಿಂದ ತೆರಳಿದ್ದಾರೆ. ಸ್ಥಳೀಯರ ಸಹಕಾರದಿಂದ ಈ ಹತ್ಯೆ ನಡೆದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬೇಕು ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಮುಖ್ ಕೆ.ಟಿ. ಉಲ್ಲಾಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಭಯೋತ್ಪಾದನೆಗೆ ಹಣಕಾಸು ನೆರವು, ಟಾರ್ಗೆಟೆಡ್ ಕಿಲ್ಲಿಂಗ್, ಸಾಮಾಜಿಕವಾಗಿ ಅಶಾಂತಿ ಸೃಷ್ಟಿ ಪಿಎಫ್‌ಐನ ಕಾರ್ಯಶೈಲಿ. ಇದೇ ಕಾರ್ಯವಿಧಾನವನ್ನು ಸುಹಾಸ್ ಹತ್ಯೆಗೆ ಬಳಸಲಾಗಿದೆ. ನಿಷೇಧಗೊಂಡ ಬಳಿಕ ಹಿಂದುಗಳ ಮೂಲಕ ಪಿಎಫ್‌ಐ ಟಾರ್ಗೆಟೆಡ್ ಹತ್ಯೆ ನಡೆಸುತ್ತದೆ ಎಂಬ ಮಾಹಿತಿಯಿತ್ತು. ಸುಹಾಸ್ ಕೊಲೆಯಲ್ಲಿ ಇದು ಸಾಬೀತಾಗಿದೆ. ಸುಹಾಸ್‌ನ ಪರಿಚಯವೇ ಇಲ್ಲದ, ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದ ಕಳಸದ ರಂಜಿತ್ ಮತ್ತು ನಾಗರಾಜ್ ಅವರನ್ನು ಈ ಕೊಲೆಯಲ್ಲಿ ಬಳಸಿಕೊಳ್ಳಲಾಗಿದೆ. ಕೊಲೆಯಲ್ಲಿ ಹಿಂದುಗಳು ಇರಬೇಕು ಎಂದು ಉದ್ದೇಶಪೂರ್ವಕವಾಗಿ ಇವರಿಬ್ಬರನ್ನು ಬಳಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಪ್ರಕರಣದ ತನಿಖೆ ನಡೆಸಲು ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. ರಾಜ್ಯದ ಪೊಲೀಸರ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಆದರೆ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಗೃಹ ಸಚಿವರ ನಿಷ್ಠೆ, ಶ್ರದ್ಧೆ, ನಿಷ್ಪಕ್ಷಪಾತ ತನಿಖೆ ಬಗ್ಗೆ ಸಂಶಯವಿದೆ. ಕುಕ್ಕರ್ ಬಾಂಬ್ ಸ್ಪೋಟ, ರಾಮೇಶ್ವರಂ ಕೆಫೆ ಸೋಟ ಪ್ರಕರಣದ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿತ್ತು. ಈ ಪ್ರಕರಣವನ್ನೂ ಹಳ್ಳ ಹಿಡಿಸುವ ಯೋಚನೆ ಸರ್ಕಾರಕ್ಕಿದೆ. ಸಿಎಂ, ಡಿಸಿಎಂ, ಗೃಹ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಕಾರಣದಿಂದ ಎನ್‌ಐಎ ತನಿಖೆ ನಡೆಸಬೇಕು ಎಂದರು.
ವಿಶ್ವಹಿಂದು ಪರಿಷತ್, ಬಜರಂಗದಳ ಮುಖಂಡರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 2047ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಸಂಚಿನ ಭಾಗವಾಗಿ ಹಿಂದು ಮುಖಂಡರಿಗೆ ಬೆದರಿಕೆ ಹಾಕಿ, ಕೊಲೆ ಮಾಡಲಾಗುತ್ತಿದೆ. ಹೊರಗಿನಿಂದ ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡಿದರೆ ದೇಶದೊಳಗೆ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿ, ದಂಗೆ ಎಬ್ಬಿಸುವ ಹುನ್ನಾರ ನಡೆಯುತ್ತಿದೆ. ಇದರ ಭಾಗವಾಗಿ ಕಳೆದ 10 ವರ್ಷದಿಂದ ಬೆದರಿಕೆಗಳು ಬರುತ್ತಿವೆ. ಅದನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದರು.
ಸುಹಾಸ್ ಹತ್ಯೆ ನಡೆದ ಸ್ಥಳದಲ್ಲಿದ್ದ ಬುರ್ಖಾಧಾರಿ ಮಹಿಳೆಯರಿಬ್ಬರು ಆರೋಪಿಗಳು ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ. ಅಲ್ಲಿ ಇದ್ದ ಬಹುತೇಕ ಜನರಿಗೆ ಘಟನೆ ನಡೆಯುತ್ತದೆ ಎಂಬುದು ಮೊದಲೇ ತಿಳಿದಿತ್ತು. ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಗಳಾದ ಮುಸ್ತಾಫ್ ಮತ್ತು ಕಬೀರ್ ಸ್ಥಳದಲ್ಲಿದ್ದ ಬಗ್ಗೆ ಬಲವಾದ ಮಾಹಿತಿಯಿದೆ. ಸುಖಾನಂದ ಶೆಟ್ಟಿ ಹತ್ಯೆ ಆರೋಪಿ ನೌಷಾದ್ ಕೂಡಾ ಸುಹಾಸ್ ಹತ್ಯೆಗೆ ಹಣ ನೀಡಿದ್ದಾನೆ. ಪ್ರಮುಖ ಆರೋಪಿ ಸಫ್ವನ್ ಎಂಬಾತ ಪಿಎಫ್‌ಐ ಕಾರ್ಯಕರ್ತ ಇಸ್ಮಾಯಿಲ್ ಇಂಜಿನಿಯರ್ ಎಂಬಾತನ ಬಾಡಿಗೆ ಮನೆಯಲ್ಲಿ ವಾಸವಿದ್ದ. ಪಿಎಫ್‌ಐ ಈ ಹತ್ಯೆಯಲ್ಲಿ ಪಾಲ್ಗೊಂಡಿದೆ ಎಂದು ಕೆ.ಟಿ. ಉಲ್ಲಾಸ್ ಆರೋಪಿಸಿದರು.
ಸುಹಾಸ್ ಹತ್ಯೆ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಠಾಣೆ ಹೆಡ್ ಕಾನ್ಸ್‌ಸ್ಟೇಬಲ್ ರಶೀದ್ ಎಂಬವರನ್ನು ತನಿಖೆಗೆ ಒಳಪಡಿಸಬೇಕು ಎಂದು ಕೆ.ಟಿ. ಉಲ್ಲಾಸ್ ಒತ್ತಾಯಿಸಿದರು.
ರಶೀದ್ ಅವರು ಸುಹಾಸ್ ಶೆಟ್ಟಿ ಅವರಿಗೆ ಪದೇ ಪದೇ ಕರೆ ಮಾಡಿ ಹಿಂಸೆ ನೀಡುತ್ತಿದ್ದ ಬಗ್ಗೆ ಆತನ ಸ್ನೇಹಿತರು ಹಾಗೂ ತಾಯಿ ಹೇಳಿಕೊಂಡಿದ್ದಾರೆ. ಘಟನೆ ನಡೆಯುವ ಮೂರು ದಿನ ಮೊದಲು ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿ ಸುಹಾಸ್ ಶೆಟ್ಟಿ ಆತ್ಮರಕ್ಷಣೆಗಾಗಿ ತನ್ನ ವಾಹನದಲ್ಲಿ ಯಾವುದೇ ಆಯುಧ ಇರಿಸಿಕೊಳ್ಳದಂತೆ ಸೂಚಿಸಿದ್ದಾರೆ. ಈ ಮಾಹಿತಿ ರಶೀದ್‌ಗೆ ತಿಳಿದಿತ್ತು. ಸುಹಾಸ್ ಕೊಲೆಯಲ್ಲಿ ರಶೀದ್ ಪಾಲುದಾರಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ರಶೀದ್‌ನನ್ನು ತನಿಖೆಗೆ ಒಳಪಡಿಸಬೇಕು ಎಂದರು.
ಗನ್ ಲೈಸನ್ಸ್ ನೀಡದ ಪೊಲೀಸರು:
ನಾನು ಅನೇಕ ಬಾರಿ ಪೊಲೀಸ್ ಇಲಾಖೆಗೆ ಆತ್ಮರಕ್ಷಣೆಗಾಗಿ ಗನ್ ಲೈಸನ್ಸ್‌ಗಾಗಿ ಸಲ್ಲಿಸಿದರೂ ತಿರಸ್ಕರಿಸಿದ್ದಾರೆ. ನಾನು ಮುಂಜಾಗೃತವಾಗಿ ಆಯುಧಗಳನ್ನು ಇಟ್ಟುಕೊಂಡಿದ್ದರೆ, ನನ್ನ ಜೊತೆ 7-8 ಮಂದಿ ಯುವಕರು ಇದ್ದರೆ ಕೇಸ್ ಹಾಕುತ್ತಾರೆ. ಸುಹಾಸ್ ಶೆಟ್ಟಿಯಲ್ಲಿ ಇದ್ದ ಆಯುಧಗಳನ್ನು ವಶಪಡಿಸಿಕೊಂಡ ನಂತರ ಆತನ ಹತ್ಯೆಯಾಗಿದೆ. ಆತನಲ್ಲಿ ಆಯುಧ ಇದ್ದಲ್ಲಿ ಆತನ ಜೀವ ಉಳಿಯುತ್ತಿತ್ತು. ಅಥವಾ ಆತನಿಗೆ ಪೊಲೀಸರು ಭದ್ರತೆ ನೀಡಿದ್ದರೆ ಆತನ ಜೀವ ಉಳಿಯುತ್ತಿತ್ತು ಎಂದು ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.
ಗೃಹಸಚಿವರು ಶನಿವಾರ ಮಂಗಳೂರಿಗೆ ಬಂದಿದ್ದು ಮಾನವೀಯ ದೃಷ್ಟಿಯಿಂದನಾದರೂ ಸುಹಾಸ್ ಶೆಟ್ಟಿ ಮನೆಗೆ ಮನೆಗೆ ಹೋಗಬೇಕಿತ್ತು. ಸುಹಾಸ್ ಶೆಟ್ಟಿ ಅಜ್ಜ ಕಾಂಗ್ರೆಸ್ ಪರ ಕೆಲಸ ಮಾಡಿದವರು, ಬಿ. ರಮಾನಾಥ ರೈ ಅವರೊಂದಿಗೆ ಸುಹಾಸ್ ಶೆಟ್ಟಿಯ ಮಾವ ಕೆಲಸ ಮಾಡುತ್ತಿದ್ದಾರೆ. ಸುಹಾಸ್ ಶೆಟ್ಟಿ ಮಿಥುನ್ ರೈ ಜೊತೆಯಲ್ಲಿ ಉತ್ತಮ ಪರಿಚಯದಲ್ಲಿ ಇದ್ದರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ರವಿ ಅಸೈಗೋಳಿ, ಹಿಂಜಾವೇ ಜಿಲ್ಲಾ ಸಂಯೋಜಕ ಲಿಖಿತ್ ಮೂಡುಶೆಡ್ಡೆ ಉಪಸ್ಥಿತರಿದ್ದರು.