ಜನಾಂಗ ದ್ವೇಷಿ ಹರೀಶ್ ಪೂಂಜ ಶಾಸಕ ಸ್ಥಾನದಲ್ಲಿರಲು ಯೋಗ್ಯರಲ್ಲ: ಕೆ.ಕೆ. ಶಾಹುಲ್ ಹಮೀದ್

ಜನಾಂಗ ದ್ವೇಷಿ ಹರೀಶ್ ಪೂಂಜ ಶಾಸಕ ಸ್ಥಾನದಲ್ಲಿರಲು ಯೋಗ್ಯರಲ್ಲ: ಕೆ.ಕೆ. ಶಾಹುಲ್ ಹಮೀದ್


ಮಂಗಳೂರು: ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವ ಹರೀಶ್ ಪೂಂಜ, ಶ್ರೀರಾಮನ ಹೆಸರಲ್ಲಿ ಪಡೆದಿರುವ ತನ್ನ ಪ್ರಮಾಣ ವಚನಕ್ಕೆ ವಿರುದ್ಧವಾಗಿ ಜನಾಂಗ ದ್ವೇಷ ತೋರಿಸಿರುವುದು ಖಂಡನೀಯ. ತಾನು ಶಾಸಕ ಎಂಬುದನ್ನು ಮರೆತು ಧರ್ಮದ ವೇದಿಕೆಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ಹರೀಶ್ ಪೂಂಜ ಕರ್ನಾಟಕದ ಶಾಸನ ಸಭೆಗೆ ಕಳಂಕ. ಬ್ಯಾರಿ ಜನಾಂಗವನ್ನು ಅವಹೇಳನ ಮಾಡಿರುವ ಹರೀಶ್ ಪೂಂಜ ಶಾಸಕ ಸ್ಥಾನದಲ್ಲಿರಲು ಯೋಗ್ಯರಲ್ಲ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತುಕೊಂಡು ತನ್ನದೇ ಕ್ಷೇತ್ರದ ಬ್ಯಾರಿ ಜನಾಂಗವನ್ನು ಅಪಮಾನಿಸಿ ಬ್ಯಾರಿ ಜನಾಂಗದ ಮೇಲೆ ಸುಳ್ಳಾರೋಪ ಹೊರಿಸಿ ತನ್ನ ಪ್ರಮಾಣ ವಚನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಹರೀಶ್ ಪೂಂಜ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. ಈಗಾಗಲೇ ಸ್ಪೀಕರ್ ಅವರ ಧರ್ಮದ ವಿಚಾರದಲ್ಲಿ ಸಡಿಲ ಮಾತುಗಳನ್ನಾಡಿ ಹಕ್ಕುಚ್ಯುತಿ ನೊಟೀಸ್ ಪಡೆದಿರುವ ಪೂಂಜ ವಿರುದ್ಧ ಬ್ಯಾರಿ ಜನಾಂಗವನ್ನು ಅವಹೇಳನ ಮಾಡಿರುವ ಪ್ರಕರಣವನ್ನು ಸೇರಿಸಿ ವಿಧಾನಸಭೆ ಕಾರ್ಯಾಲಯ ವಿಚಾರಣೆ ನಡೆಸಬೇಕು. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಸ್ಪೀಕರ್ ಯು.ಟಿ ಖಾದರ್ ಅವರು ಈ ಬಗ್ಗೆ ಗಮನ ಹರಿಸಬೇಕು.

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ ಕೋಮು ಸಾಮರಸ್ಯಕ್ಕೆ ಹೆಸರುವಾಸಿ. ನಾನು ಆ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಸೇವೆ ಮಾಡಿರುತ್ತೇನೆ. ಆ ಊರಿನಲ್ಲಿ ನೆಲೆಗೊಂಡಿರುವ ಕೋಮು ಸಾಮರಸ್ಯವು ಕರಾವಳಿಗೆ ಮಾದರಿ ಎನ್ನಬಹುದು.

ತೆಕ್ಕಾರಿನ ಸರ್ವ ಧರ್ಮೀಯರು ಪರಸ್ಪರ ಸಹೋದರತೆಯ ಭಾವದಲ್ಲಿ ಬದುಕುತ್ತಿದ್ದಾರೆ. ಆ ಊರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನಿರ್ಮಾಣದಲ್ಲಿ ಊರಿನ ಬ್ಯಾರಿಗಳು (ಮುಸ್ಲಿಮರು) ಸಹಕರಿಸಿದ್ದಾರೆ. ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಗುಲದ ಆಡಳಿತ ಸಮಿತಿಯವರು ಬ್ಯಾರಿಗಳಿಗೆ ವಿಶೇಷ ಆತಿಥ್ಯ ನೀಡಿದ್ದರು.

ಸರ್ವ ಧರ್ಮಿಯರ ಸಹಕಾರ ಬೆಂಬಲದಿಂದ ನಿರ್ಮಾಣವಾಗಿರುವ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರು ಬ್ಯಾರಿ ಜನಾಂಗವನ್ನು ಅವಹೇಳ ಮಾಡಿರುವುದು ಕ್ಷಮಿಸಲಾಗದ ಅಪರಾಧ. ಊರಿನ ಸೌಹಾರ್ದತೆಗೆ ಹುಳಿ ಹಿಂಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶದಿಂದ ಹರೀಶ್ ಪೂಂಜ ತನ್ನ ಕೊಳಲು ನಾಲಿಗೆಯನ್ನು ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನೆಲೆಗೊಂಡಿರುವ ಸಮಯದಲ್ಲಿ ಶಾಸಕರು ಜಿಲ್ಲೆಯ ದೊಡ್ಡ ಸಂಖ್ಯೆಯ ಸಮುದಾಯವಾದ ಬ್ಯಾರಿ ಜನಾಂಗವನ್ನು ಅಪಮಾನಿಸಿ ಬ್ಯಾರಿ ಜನಾಂಗದ ಮೇಲೆ ಸುಳ್ಳಾರೋಪ ಹೊರಿಸಿ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನ ಮಾಡಿದ್ದಾರೆ. ಸಮುದಾಯಗಳ ಮಧ್ಯೆ ದ್ವೇಷ ಮತ್ತು ಶತ್ರುತ್ವ ಬೆಳೆಸಲು ಪ್ರಚೋದಿಸಿ ಜಿಲ್ಲೆಯನ್ನು ಅಶಾಂತಿಗೆ ದೂಡಿಹಾಕುವ ದುರುದ್ದೇಶದಿಂದ ಬ್ಯಾರಿ ಜನಾಂಗವನ್ನು ಅವಹೇಳನ ಮಾಡಿದ್ದಾರೆ. ಬ್ಯಾರಿ ಸಮುದಾಯವನ್ನು ಪ್ರಚೋದಿಸಿ ರಾಜಕೀಯ ಲಾಭ ಪಡೆಯುವ ಸಂಚಿನ ಭಾಗವಾಗಿ ಅವರು ತೆಕ್ಕಾರಿನ ದೇವಸ್ಥಾನದ ಕಾರ್ಯಕ್ರಮದಲ್ಲಿ ನಾಲಿಗೆ ಹರಿಯಬಿಟ್ಟಿದ್ದಾರೆ.

ತನ್ನ ರಾಜಕೀಯ ಹಿತಾಸಕ್ತಿಗಾಗಿ ನಿರಂತರವಾಗಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಸಾಧಿಸುತ್ತಿರುವ ಬೆಳ್ತಂಗಡಿ ಶಾಸಕರು ಕ್ಷೇತ್ರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಕೋಮು ದ್ವೇಷದ ಭಾಷಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಈ ಹಿಂದೆಯೂ ಕೆಲ ಧಾರ್ಮಿಕ ಕಾರ್ಯಕ್ರಮದಲ್ಲಿ ಹರೀಶ್ ಪೂಂಜ ದ್ವೇಷ ಭಾಷಣ ಮಾಡಿದ್ದರು. ಅದೇ ಚಾಳಿಯನ್ನು ತೆಕ್ಕಾರಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಂದುವರಿಸಿದ್ದಾರೆ. 

ಹರೀಶ್ ಪೂಂಜ ಬ್ಯಾರಿಗಳನ್ನು ಅವಹೇಳನ ಮಾಡಿರುವ ವಿಚಾರವನ್ನು ನಾನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಮನಕ್ಕೆ ದೂರವಾಣಿ ಮೂಲಕ ತಿಳಿಸಿರುತ್ತೇನೆ. ತಕ್ಷಣ ಸ್ಪಂದಿಸಿರುವ ಸಚಿವರು ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸ್ಥಳೀಯ ನಿವಾಸಿಯೊಬ್ಬರು ನೀಡಿರುವ ದೂರಿನನ್ವಯ ಶಾಸಕ ಹರೀಶ್ ಪೂಂಜ ವಿರುದ್ಧ ಬಿಎನ್‌ಎಸ್ ಕಾಯ್ದೆಯ ಕಠಿಣ ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ. ಬ್ಯಾರಿ ಜನಾಂಗವನ್ನು ಅವಹೇಳನ ಮಾಡಿರುವ ಹರೀಶ್ ಪೂಂಜ ಮೇಲೆ ಕಾನೂನಿನ ಉಕ್ಕಿನ ಕೈಗಳಿಂದ ಪಾಠ ಕಲಿಸಬೇಕು. ಪೊಲೀಸರು ಹರೀಶ್ ಪೂಂಜ ಅವರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕೆ.ಕೆ. ಶಾಹುಲ್ ಹಮೀದ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article