.jpeg)
ಚೂರಿ ಇರಿತ: ಏಳು ಮಂದಿ ಬಂಧನ
ಮಂಗಳೂರು: ಸುಹಾಸ್ ಹತ್ಯೆ ಬಳಿಕ ಶುಕ್ರವಾರ ಮಂಗಳೂರಿನ ಮೂರು ಪ್ರದೇಶಗಳಲ್ಲಿ ನಡೆದ ಇರಿತ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತೊಕ್ಕೊಟ್ಟು ಮತ್ತು ಕಣ್ಣೂರಿನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಲೋಹಿತಾಶ್ವ(32) ಮುಡಿಪು, ಪುನೀತ್(28) ವೀರನಗರ ಹಾಗ ಗಣೇಶ್ ಪ್ರಸಾದ್(23) ಇವರನ್ನು ಬಂಧಿಸಲಾಗಿದೆ.
ಈ ಆರೋಪಿಗಳು ಉಳ್ಳಾಲದ ತೊಕ್ಕೊಟ್ಟು ಹಾಗೂ ಅಡ್ಯಾರ್ ಕಣ್ಣೂರುಗಳಲ್ಲಿ ಅನ್ಯಕೋಮಿನ ವ್ಯಕ್ತಿಗಳಿಗೆ ಇರಿದು ಪರಾರಿಯಾಗಿದ್ದರು. ಸುಹಾಸ್ ಹತ್ಯೆಗೆ ಪ್ರತೀಕಾರವಾಗಿ ಆರೋಪಿಗಳು ಈ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಶುಕ್ರವಾರ ನಸುಕಿನ 3.30ರ ಸುಮಾರಿಗೆ ಆರೋಪಿಗಳು ಕಣ್ಣೂರಿನಲ್ಲಿ ನೌಶಾದ್(39) ಎಂಬವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ನೌಶಾದ್‌ರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಚೇತರಿಸುತ್ತಿದ್ದಾರೆ. ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಇದಕ್ಕೂ ಮುನ್ನ ಗುರುವಾರ ಮಧ್ಯರಾತ್ರಿ 12.30ರ ಸಮಯ ಆರೋಪಿಗಳು ತೊಕ್ಕೊಟ್ಟಿನಲ್ಲಿ ಫೈಜಲ್(40) ಎಂಬವರಿಗೆ ಇರಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಂಚಾಡಿಯಲ್ಲಿ ನಡೆದ ಇರಿತ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಾದ ಲಿಖಿತ್(29) ಬಜಪೆ, ರಾಕೇಶ್(34) ಕುತ್ತಾರ್, ಧನರಾಜ್ ಯಾನೆ ಧನು ಸುರತ್ಕಲ್ (24) ಹಾಗೂ ಪ್ರಶಾಂತ್ ಶೆಟ್ಟಿ(26) ಬೆಳ್ತಂಗಡಿ ಬಂಧಿತರು.
ಕೊಂಚಾಡಿಯಲ್ಲಿ ಕಾರಿನಲ್ಲಿ ಆಗಮಿಸಿದ ಆರೋಪಿಗಳು ಲುಕ್ಮಾನ್ ಎಂಬವರಿಗ ಇರಿದು ಪರಾರಿಯಾಗಿದ್ದರು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಾಲ್ವರ ಸೆರೆ..
ನಗರದ ವಿವಿಧ ಕಡೆ ಬಸ್ಸುಗಳಿಗೆ ಕಲ್ಲೂ ತೂರಾಟ ನಡೆಸಿ ಹಾನಿಗೊಳಿಸಿದ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ.