
ಫಾಜಿಲ್ ಕುಟುಂಬ ಸರ್ಕಾರ ನೀಡಿದ್ದ ಪರಿಹಾರದ ಹಣವನ್ನು ಸುಹಾಸ್ ಕೊಲೆಗೆ ಬಳಸಿದೆ: ಸುನಿಲ್ ಕುಮಾರ್ ಆರೋಪ
ಮಂಗಳೂರು: ಫಾಜಿಲ್ ಕುಟುಂಬ ಸರ್ಕಾರ ನೀಡಿದ ಪರಿಹಾರದ ಹಣವನ್ನು ಸುಹಾಸ್ ಶೆಟ್ಟಿ ಕೊಲೆಗೆ ಬಳಸಿಕೊಂಡಿದೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಶಾಸಕರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಫಾಜಿಲ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿತ್ತು. ಈ ಪರಿಹಾರದ ಹಣವನ್ನು ಫಾಜಿಲ್ ಕುಟುಂಬ ಕೊಲೆಗೆ ಬಳಸಿಕೊಂಡಿದೆ. ಸುಹಾಸ್ ಶೆಟ್ಟಿ ಹತ್ಯೆಗೆ ಫಾಜಿಲ್ ಸೋದರ 5 ಲಕ್ಷ ರೂ. ಸುಪಾರಿ ನೀಡಿದ್ದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ನೀಡಿದ ಈ ಪರಿಹಾರ ಇನ್ನೆಷ್ಟು ಕೊಲೆಗೆ ಬಳಕೆಯಾಗಬೇಕು? ಮೊದಲು ಬಡ್ಡಿ ಸಹಿತ ಈ ಹಣ ವಸೂಲಿಯಾಗಲಿ. ಸರ್ಕಾರ ರಚಿಸುವ ಆಂಟಿ ಕಮ್ಯುನಲ್ ಫೋರ್ಸ್ (ಎಸಿಎಫ್) ಅಸ್ತಿತ್ವಕ್ಕೆ ಬಂದ ತಕ್ಷಣ ಮೊದಲು ಮಾಡಬೇಕಾದ ಕೆಲಸ ಇದಾಗಲಿ. ಇಲ್ಲವಾದರೆ ಎಸಿಎಫ್ ರಚನೆಯ ಉದ್ದೇಶ ಹಿಂದುತ್ವದ ದಮನ ಎಂಬುದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಬಜ್ಪೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಯಿತು. ಫಾಜಿಲ್ ಹತ್ಯೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.