
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾಂಗ್ರೆಸ್ ಕಾರ್ಯಕರ್ತರ ಭೇಟಿ
ಕಾಪು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಕಾಪು ರಾಜೀವ ಭವನದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿದರು.
ಅವರು ಈ ಸಂದರ್ಭ ಮಾತನಾಡಿ, ಉಡುಪಿಯ ಉಸ್ತುವಾರಿ ಸಚಿವೆಯಾಗಿ ಇಲ್ಲಿನ ಜನರ ಶಿಸ್ತು, ಬದ್ಧತೆ, ಸಾಮಾಜಿಕ ಕಾಳಜಿ, ಸಂಸ್ಕೃತಿಯ ಶ್ರದ್ಧೆಯನ್ನು ನಾನೂ ಅಳವಡಿಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಉಡುಪಿ ಮಂಗಳೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸದಿದ್ದರೂ, ಸಮಾನತೆಯ ದೃಷ್ಟಿಯಿಂದ ಇಲ್ಲಿಯೂ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಗಿದೆ. 1 ಕೋಟಿ 28 ಲಕ್ಷ ಮಹಿಳೆಯರಿಗೆ ತಿಂಗಳಿಗೆ 40 ಸಾವಿರ ರೂಪಾಯಿ ಸರಕಾರದಿಂದ ದೊರಕುತ್ತಿದೆ ಎಂದರು.
ಕಾಪು ತಾಲೂಕಿನಲ್ಲಿ ಸುಮಾರು 6 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಯೋಜನೆಗಳು ಜನರಿಗೆ ತಲುಪಲು ನಾವೆಲ್ಲರೂ ಶ್ರಮಿಸೋಣ ಎಂದೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಂಗ್ರೆಸ್ ಸರಕಾರ ಜನಪರ ಕಾರ್ಯಗಳನ್ನು ಹಮ್ಮಿಕೊಂಡಿದೆ. ಗೃಹಲಕ್ಷ್ಮಿಯಂತಹ ಯೋಜನೆಗಳು ಮಹಿಳೆಯರ ಬದುಕಿಗೆ ಆಧಾರವಾಗಿದೆ. ಲಕ್ಷ್ಮಿ ಹೆಬಾಳ್ಕರ್ ಅವರ ಕಾಪು ಭೇಟಿ ಕಾರ್ಯಕರ್ತರಿಗೆ ಹೊಸ ಹುರುಪನ್ನು ತಂದಿದೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪೋಷಿತ ಅಧಿಕಾರಿಗಳಿದ್ದು, ಅವರು ಜನರಪರ ಕಾರ್ಯ ಮಾಡುವ ಕಾಂಗ್ರೆಸ್ ಕಾರ್ಯಕರ್ತರ ಮಾತಿಗೆ ಬೆಲೆ ನೀಡುತ್ತಿಲ್ಲ. ಅಂತಹ ಅಧಿಕಾರಿಗಳ ಬಗ್ಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಈ ಸಂದರ್ಭ ಮಾತನಾಡಿದರು.
ಕಾಪು ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಎಂ.ಎ.ಗಫೂರ್, ನವೀನ್ ಚಂದ್ರ ಶೆಟ್ಟಿ, ನವೀನ್ ಚಂದ್ರ ಸುವರ್ಣ, ಗೀತಾ ವಾಗ್ಳೆ, ಶಾಂತಲತಾ ಶೆಟ್ಟಿ, ನವೀನ್ ಚಂದ್ರ ಜೆ ಶೆಟ್ಟಿ, ಶರ್ಫುದ್ಧೀನ್ ಶೇಖ್, ಮಹಮ್ಮದ್ ನಿಯಾಝ್, ಆಶಾ ಕಟಪಾಡಿ, ದಿವಾಕರ್ ಶೆಟ್ಟಿ ಮ್ತತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಪು ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್ ಸ್ವಾಗತಿಸಿ, ಅಮೀರ್ ಕಾಪು ನಿರೂಪಿಸಿ ವಂದಿಸಿದರು.