 
ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
Saturday, June 21, 2025
ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ಆಪ್ತ ಸಮಾಲೋಚಕರಾದ ಡಾ. ಮಂಜುಳಾ ರಾವ್ ಅವರು ಆಗಮಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಮಾತನಾಡಿ, ಕೇವಲ ಪರೀಕ್ಷೆಯ ಅಂಕಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿರುವ ಈ ಪ್ರಸ್ತುತ ಸಮಯದಲ್ಲಿ ಶಕ್ತಿ ಶಾಲೆಯು ಅಂಕದ ಜೊತೆಗೆ ಸಂಸ್ಕಾರ ಸಂಸ್ಕೃತಿಯನ್ನು ಕೂಡ ಮಕ್ಕಳಿಗೆ ಪರಿಚಯಿಸುತ್ತಿದೆ. ಇದು ತುಂಬಾ ಸಂತೋಷಕರವಾದ ವಿಷಯವಾಗಿದೆ ಎಂದು ಹೇಳಿದರು.
ಮಕ್ಕಳು ಮೊಬೈಲ್ ಅನ್ನು ಸ್ವಲ್ಪ ದೂರ ಇಟ್ಟು ದೈಹಿಕ ಚಟುವಟಿಕೆಗಳಿಗೆ ಜಾಸ್ತಿ ಒತ್ತು ನೀಡಬೇಕು. ದಿನಾ ಬೆಳಗ್ಗೆ ಎದ್ದು ಪ್ರಾಣಾಯಾಮ ಎಂಬ ಉಸಿರಾಟದ ಯೋಗ ಮಾಡಬೇಕು. ಇದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸಿ ಮಾನಸಿಕ ಸ್ಥಿರತೆಯನ್ನು ಪಡೆಯಬಹುದು ಎಂದ ಅವರು ಅಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಏಕಾಗ್ರತೆಯನ್ನು ಹೆಚ್ಚಿಸಲು ಕೆಲವು ಸರಳ ವ್ಯಾಯಾಮವನ್ನು ಕೂಡ ಈ ಸಂದರ್ಭದಲ್ಲಿ ಇವರು ತಿಳಿಸಿಕೊಟ್ಟರು. ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಗತ್ತು ಆಚರಿಸುವುದು ಅಭಿನಂದನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಮಂಜುಳಾ ರಾವ್ ಇವರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಭಾರತಿ ನಿಕಟಪೂರ್ವ ಅಧ್ಯಕ್ಷ ಕರಿಯಪ್ಪ ರೈ ಅವರು ಮಾತನಾಡಿ, ಯೋಗವು ನಮ್ಮ ಜೀವನಕ್ಕೆ ತುಂಬಾ ಮುಖ್ಯವಾದದ್ದು, ಯೋಗ ಮಾಡುವುದರ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪಡೆದು ಈ ದೇಶದ ಸಂಪತ್ತು ನಾವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ. ಮಾತನಾಡಿ, ಭಾರತ ಜಗತ್ತಿಗೆ ಕೊಟ್ಟ ಕೊಡುಗೆ ಎಂದರೆ ಅದು ಯೋಗ. ಯೋಗ ಕೇವಲ ಒಂದೆರಡು ದಿನ ಮಾಡಿದರೆ ಸಾಲದು, ಅದನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಯೋಗದ ನಿಜವಾದ ಪ್ರಯೋಜನ ನಮಗೆ ದೊರಕಲು ಸಾಧ್ಯವಾಗುವುದು ಎಂದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ತರಬೇತುದಾರರಾದ ಸುಭದ್ರ ಹಾಗೂ ವೀಣಾ ಮಾರ್ಲ ಯೋಗವನ್ನು ನೆರವೇರಿಸಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆಯ ಪ್ರತಿಭಾನ್ವಿತ ಪುಟಾಣಿಗಳಿಂದ ಅದ್ಭುತವಾದ ಯೋಗ ಪ್ರದರ್ಶನವು ನಡೆಯಿತು.
ಶಕ್ತಿ ವಸತಿ ಶಾಲೆಯ ಶಿಕ್ಷಕ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಶಕ್ತಿ ವಸತಿ ಶಾಲೆಯ ಶಿಕ್ಷಕಿ ಭವ್ಯಶ್ರೀ ಸ್ವಾಗತಿಸಿದರು. ಕ್ರೀಡಾ ಭಾರತಿ ನಿಕಟಪೂರ್ವ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರು ವಂದಿಸಿದರು.










