
ಉಚಿತ ಪಯಣದಿಂದ ಕೆಎಸ್ಸಾರ್ಟಿಸಿಗೆ ನಷ್ಟವಾಗಿಲ್ಲ-ಪುತ್ತೂರಿನಲ್ಲಿ ವಿದ್ಯಾರ್ಥಿಗಳಿಗಾಗಿ ಸಿಟಿಬಸ್: ಅಶೋಕ್ ರೈ
ಪುತ್ತೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕೊಟ್ಟು ರಾಜ್ಯದಲ್ಲಿ ಬಸ್ಸು ಇಲ್ಲ ಎಂಬ ಆರೋಪ ಇತ್ತು. ಆದರೆ ಯಾವುದೇ ನಿಗಮವೂ ನಷ್ಟದಲ್ಲಿಲ್ಲ. ಪಾಪ ನಷ್ಟ ಆಗಿರೋದು ಬಿಜೆಪಿಯವರಿಗೆ. ಅವರು 5 ವರ್ಷದಲ್ಲಿ ಸಿಬಂದಿಗಳ ನೇಮಕ ಮಾಡದೆ ನಷ್ಟ ಆಗಿದೆ. ಪುತ್ತೂರಿನಲ್ಲಿ ಸಿಟಿಬಸ್ ಆರಂಭಿಸುವ ಚಿಂತನೆ ಇದೆ. ಇದು ವಿದ್ಯಾರ್ಥಿಗಳಿಗೆ ಪೂರಕವಾಗಿ ನಡೆಯಲಿದೆ. ಸಾಧಕ ಬಾಧಕಗಳ ವಿಮರ್ಶೆ ನಡೆಸಿ ಈ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಭಾನುವಾರ ಪುತ್ತೂರಿನಿಂದ 28 ಹೊಸ ಮಾರ್ಗಗಳಿಗೆ ಕೆಎಸ್ಸಾರ್ಟಿಸಿ ಬಸ್‌ಗಳ ಓಡಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಸ್ ಓಡಾಟದ ಹೊಸಮಾರ್ಗಗಳು:
ಕೆಎಸ್ಸಾರ್ಟಿಸಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವುದಕ್ಕಾಗಿಯೇ ಪುತ್ತೂರು-ಉಪ್ಪಿನಂಗಡಿ, ಪುತ್ತೂರು -ಪೆರ್ಲಂಪಾಡಿ-ಕೊಳ್ತಿಗೆ-ಬೆಳ್ಳಾರೆ-ಕಲ್ಪಣೆ, ಪುತ್ತೂರು-ಅನಂತಾಡಿ, ಪುತ್ತೂರು-ಸುರ್ಯ, ಪುತ್ತೂರು-ವಿಟ್ಲ-ಕಾಟುಕುಕ್ಕೆ-ಪುತ್ತೂರು, ಪುತ್ತೂರು-ಉಪ್ಪಿನಂಗಡಿ-ಕಡಬ-ಸುಳ್ಯ, ಸುಳ್ಯ-ಕಡಬ-ಉಪ್ಪಿನಂಗಡಿ, ಉಪ್ಪಿನಂಗಡಿ-ಪುತ್ತೂರು ಮಾರ್ಗಗಳಲ್ಲಿ ಹೊಸ ಬಸ್‌ಗಳು ಓಡಾಟ ನಡೆಸಲಿವೆ ಎಂದು ಅವರು ತಿಳಿಸಿದರು.
ಚಾಲಕ ಹಾಗೂ ನಿರ್ವಾಹಕರ ಕೊರತೆ ರಾಜ್ಯದಲ್ಲಿಯೇ ಹಲವು ವರ್ಷಗಳಿಂದ ಇತ್ತು. ದಕ-ಉಡುಪಿ ಜಿಲ್ಲೆಯಲ್ಲಿ ಬಸ್ಸಿನ ಕೊರತೆಯೂ ಇತ್ತು. ಕಾಂಗ್ರೇಸ್ ಆಡಳಿತಕ್ಕೆ ಬಂದ ಬಳಿಕ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪರಿಣಾಮ 2900 ಸಿಬಂಧಿಗಳ ನೇಮಕ ಮಾಡಿದೆ. ಚಾಲಕ ಕಂ ನಿರ್ವಾಹಕ ಸಿಬ್ಬಂದಿ ನೇಮಕಕ್ಕೆ ಗುತ್ತಿಗೆದಾರ ಪದ್ಧತಿಯಲ್ಲಿ ಅವಕಾಶ ಇಲ್ಲ. ಪ್ರಸ್ತುತ ಪುತ್ತೂರು ಡಿಪೋಗೆ 326 ಸಿಬಂಧಿಗಳ ನೇಮಕವಾಗಿದೆ. ಅವರು ತರಬೇತಿಯಲ್ಲಿದ್ದು, ಶೀಘ್ರದಲ್ಲಿ ಸೇವೆಗೆ ಸೇರಿಕೊಳ್ಳಲಿದ್ದಾರೆ. ತೀರಾ ಸಮಸ್ಯೆಯಿಂದ ಬಳಲುತ್ತಿರುವ ಕೆಲ ಮಾರ್ಗಗಳಲ್ಲಿ ಬಸ್ ಓಡಾಟದ ವ್ಯವಸ್ಥೆಯನ್ನು ಈಗ ಉದ್ಘಾಟಿಸಲಾಗಿದೆ. ಪುತ್ತೂರಿನಿಂದ ಮಂಗಳೂರಿಗೆ ನಿಲುಗಡೆ ರಹಿತ ಬಸ್ ಓಡಾಟ ಆರಂಭವಾಗಲಿದೆ. ಇದಕ್ಕೆ ‘ಪುತ್ತೂರು ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗುವುದು ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ತಾಂತ್ರಿಕ ವಿಭಾಗದ ಮುಖ್ಯಸ್ಥ ದೇವರಾಜ ಶೆಟ್ಟಿ, ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್, ವಿಭಾಗೀಯ ಕಾರ್ಯದರ್ಶಿ ಲೋಕೇಶ್, ಕಾಂಗ್ರೆಸ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಪೂಡಾ ಅಧ್ಯಕ್ಷ ಅಮಳ ರಾಮಚಂದ್ರ, ಪ್ರದೀಪ್ ಪಾಂಬಾರ್, ಪವನ್ ಕೊಳ್ತಿಗೆ, ಶ್ಯಾಮಸುಂದರ್ ರೈ, ಮುರಳೀಧರ್ ರೈ ಮತ್ತಿತರರು ಭಾಗವಹಿಸಿದ್ದರು.