
ಸೌತೆಡ್ಕದಲ್ಲಿ ಕಾಡಾನೆಗೆ ವ್ಯಕ್ತಿ ಬಲಿ: ಎರಡೂವರೆ ತಿಂಗಳ ಅವಧಿಯಲ್ಲಿ ಎರಡನೇ ಘಟನೆ
ಸೌತೆಡ್ಕ: ಗೇರು ಪ್ಲಾಂಟೇಶನ್‌ಗೆ ಬಂದಿದ್ದ ಕಾಡಾನೆಗಳನ್ನು ಓಡಿಸುತ್ತಿರುವ ಸಂದರ್ಭದಲ್ಲಿ ಆನೆಯೊಂದು ತಿರುಗಿ ಬಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ತಿವಿದು ಕೊಂದ ಘಟನೆ ಕಡಬ ತಾಲೂಕಿನ ಸೌತಡ್ಕ ಎಂಬಲ್ಲಿ ಗುರುವಾರ ನಡೆದಿದೆ.
ಆನೆಯ ಧಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿ ಸೌತೆಡ್ಕ ಸಮೀಪ ಮುರತ್ತಮೇಲು ನಿವಾಸಿ ಬಾಲಕೃಷ್ಣ ಶೆಟ್ಟಿ (60) ಎಂದು ತಿಳಿದುಬಂದಿದೆ.
ಸೌತೆಡ್ಕ ದೇವಳದಿಂದ 1 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಇದರೊಂದಿಗೆ ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಆನೆ ದಾಳಿಗೆ ಎರಡನೇ ಬಲಿಯಾಗಿದೆ. ಕಳೆದ ಎಪ್ರಿಲ್ 29ರಂದು ಪೆರ್ಲಂಪಾಡಿ ಎಂಬಲ್ಲಿನ ರಬ್ಬರ್ ಪ್ಲಾಂಟೇಶನ್‌ನಲ್ಲಿ ಕೂಲಿ ಕಾರ್ಮಿಕೆ ಚೆಲ್ಲಮ್ಮ ಎಂಬ ವೃದ್ಧೆ ಆನೆ ದಾಳಿ ಸಿಲುಕಿ ಮೃತಪಟ್ಟಿದ್ದರು. ಸುಮಾರು ಎರಡೂವರೆ ತಿಂಗಳ ಅವಧಿಯಲ್ಲಿ ಕಾಡಾನೆಗಳಿಗೆ ಇಬ್ಬರು ಪಟ್ಟಂತಾಗಿದೆ.
ಸೌತೆಡ್ಕ ಸಮೀಪದ ಗುಂಡಿ ಎಂಬಲ್ಲಿರುವ ರಬ್ಬರ್ ಪ್ಲಾಂಟೇಶನ್‌ನಲ್ಲಿ ಮುಂಜಾನೆ ಎರಡು ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದವು. ಈ ಕಾಡಾನೆಗಳನ್ನು ಓಡಿಸುವ ಸಂದರ್ಭದಲ್ಲಿ ಆನೆ ತಿರುಗಿ ಬಂದಿದ್ದು, ದಾರಿಯಲ್ಲಿದ್ದ ಬಾಲಕೃಷ್ಣ ಶೆಟ್ಟಿ ಅವರಿಗೆ ತಿವಿದು ಗಾಯಗೊಳಿಸಿತು. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪೆರ್ಲಂಪಾಡಿ ಘಟನೆಯಲ್ಲೂ ಮುಂಜಾನೆ ಕಾಡಾನೆ ಕಣಿಯಾರು ರಬ್ಬರ್ ತೋಟಕ್ಕೆ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ರಬ್ಬರ್ ಹಾಲು ಸಂಗ್ರಹಿಸುತ್ತಿದ್ದ 65ರ ವೃದ್ದೆ ಚೆಲ್ಲಮ್ಮ ಅವರಿಗೆ ಕಾಡಾನೆ ತುಳಿದು ಸಾಯಿಸಿತ್ತು.
ಕಾಡಾನೆ ಉಪಟಳ-ಭಯಭೀತ ವಾತಾವರಣ:
ಕಳೆದ ಹಲವು ವರ್ಷಗಳಿಂದ ಕಾಡಾನೆಗಳ ಧಾಳಿ ನಡೆಯುತ್ತಿದ್ದು, ಕಡಬ ತಾಲೂಕಿನ ಕೊಂಬಾರು, ಕಲ್ಲುಗುಡ್ಡೆ, ಬಿಳಿನೆಲೆ ಕೊಕ್ಕಡ, ಪುತ್ತೂರು ತಾಲೂಕಿನ ಪೆರ್ನಾಜೆ, ಪಾಣಾಜೆ, ಪೆರ್ಲಂಪಾಡಿ ಮತ್ತಿತರ ಕಾಡುಪ್ರದೇಶಗಳ ಸಮೀಪದಲ್ಲಿ ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿಹಾನಿ ನಡೆಸುತ್ತಿವೆ. ಕಡಬದಲ್ಲಿಈ ಬಗ್ಗೆ ಹಲವು ಪ್ರತಿಭಟನೆಗಳೂ ನಡೆದಿದೆ. ಅರಣ್ಯ ಇಲಾಖೆಯಿಂದ ಸಮರ್ಪಕ ಕ್ರಮದ ಕೊರತೆಯಿಂದಾಗಿ ಆನೆ ದಾಳಿ ನಡೆಯುತ್ತಿದೆ ಎಂಬ ಆಕ್ರೋಶಗಳೂ ವ್ಯಕ್ತವಾಗಿವೆ. ಇದೀಗ ಮತ್ತೆ ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕಾಡಿನ ಭಾಗದಲ್ಲಿರುವ ಜನಜೀವನ ಈ ಆನೆದಾಳಿಯಿಂದ ಭಯಭೀತವಾಗಿದೆ. ಸಂಜೆ 6 ಗಂಟೆಯ ನಂತರ ಜನರ ಓಡಾಟವೇ ಕಷ್ಟವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸೌತಡ್ಕದ ಈ ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.