
ಜು.14-16: ಕುಂದಾಪುರದಿಂದ ಸುಳ್ಯದವರೆಗೆ ‘ಸೌಹಾರ್ದ ಸಂಚಾರ’
ಮಂಗಳೂರು: ಕರಾವಳಿಯಲ್ಲಿ ಕೋಮು ವೈಷಮ್ಯವನ್ನು ತೊಡೆದು ಸೌಹಾರ್ದತೆಯ ಸಂದೇಶ ಪಸರಿಸಲು ಸುನ್ನಿ ಯುವಜನ ಸಂಘ (ಎಸ್‌ವೈಎಸ್) ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜು.14ರಿಂದ 16ರವರೆಗೆ ಕುಂದಾಪುರದಿಂದ ಸುಳ್ಯದವರೆಗೆ ‘ಸೌಹಾರ್ದ ಸಂಚಾರ’ ಕಾರ್ಯಕ್ರಮ ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್, ಒಂದು ಕಾಲದಲ್ಲಿ ಶಾಂತಿ, ಸೌಹಾರ್ದತೆಯ ನೆಲವಾಗಿದ್ದ ಕರಾವಳಿಯಲ್ಲಿ ಕೋಮು ವೈಷಮ್ಯ ತೀವ್ರಗೊಳ್ಳುತ್ತಿದ್ದು, ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿವೆ. ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿರುವ ನಾಡು ಮಾನವೀಯತೆಯ ವಿಷಯದಲ್ಲಿ ಮಾತ್ರ ಬಡವಾಗುತ್ತಿದೆ. ಇಂಥ ಕೋಮು ವೈಷಮ್ಯಕ್ಕೆ ಅಂತ್ಯ ಹಾಡುವುದು ಇಂದಿನ ತುರ್ತು ಅಗತ್ಯ. ಈ ಹಿನ್ನೆಲೆಯಲ್ಲಿ ಸೌಹಾರ್ದ ಸಂಚಾರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಕುಂದಾಪುರದಿಂದ ಸುಳ್ಯದವರೆಗೆ ಸರ್ವ ಧರ್ಮೀಯರು ಜತೆಗೂಡಿ ಸಾಗುವ ‘ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ’ ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ಮೂರು ದಿನಗಳ ಕಾಲ ಕುಂದಾಪುರ, ಉಡುಪಿ, ಕಾರ್ಕಳ, ಕಾಪು, ಪಡುಬಿದ್ರಿ, ಮೂಲ್ಕಿ, ಸುರತ್ಕಲ್, ಮಂಗಳೂರು, ಫರಂಗಿಪೇಟೆ, ಬಿ.ಸಿ.ರೋಡು, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ ಕೇಂದ್ರಗಳಲ್ಲಿ ಕಾಲ್ನಡಿಗೆ ಜಾಥಾ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಧರ್ಮೀಯ ಬಾಂಧವರು ನಡಿಗೆಯಲ್ಲಿ ಭಾಗವಹಿಸಲಿದ್ದು, ವಿವಿಧ ಧರ್ಮಗಳ ಮುಖಂಡರು, ಸಾಮಾಜಿಕ ಚಿಂತಕರು ಸಂದೇಶ ನೀಡಲಿದ್ದಾರೆ ಎಂದು ಅಬೂಬಕ್ಕರ್ ಸಿದ್ದೀಕ್ ಹೇಳಿದರು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು, ಮಾಜಿ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಮಡಿಕೇರಿ, ಸಮಾಜ ಸೇವಕ ಹೈದರ್ ಪರ್ತಿಪಾಡಿ, ವಕ್ಫ್ ಸಲಹಾ ಮಂಡಳಿ ಜಿಲ್ಲಾಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ, ರಾಜ್ಯ ಕಾರ್ಯದರ್ಶಿ ಹಸೈನಾರ್ ಆನೆಮಹಲ್ ಹಾಸನ, ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಹಾಮೀಂ ತಂಙಳ್ ಬಾಳೆಹೊನ್ನೂರು ಇದ್ದರು.