
ನಿಷೇಧಿತ ಡ್ರಗ್ಸ್ ಪೂರೈಕೆ ಮಾಡಿ ಸಿಕ್ಕಿಬಿದ್ದಿರುವ ಆಪ್ತ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ ನೀಡಬೇಕು: ಶಾಸಕ ಭರತ್ ಶೆಟ್ಟಿ ಆಗ್ರಹ
ಮಂಗಳೂರು: ಡ್ರಗ್ಸ್ ಪೂರೈಕೆ ಪ್ರಕರಣದಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ. ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ತನ್ನ ಆಪ್ತನ ಬಂಧನದ ಬಗ್ಗೆ ಇದುವರೆಗೆ ಮಾತನಾಡಿಲ್ಲ. ನಿಷೇಧಿತ ಡ್ರಗ್ಸ್ ಪೂರೈಕೆ ಮಾಡಿ ಸಿಕ್ಕಿಬಿದ್ದಿರುವ ಆಪ್ತ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ ನೀಡಬೇಕು, ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಆಗ್ರಹಿಸಿದರು.
ಕಳೆದ ಒಂದೂವರೆ ವರ್ಷದಿಂದ ಕಲಬುರಗಿಯಲ್ಲಿ ಡ್ರಗ್ಸ್ ಪೂರೈಕೆ ಹೆಚ್ಚಾಗಿದೆ. ಈ ಹಿಂದೆ ಡ್ರಗ್ಸ್ ಸರಬರಾಜು ಪತ್ತೆಯಾಗಿದ್ದರೂ, ರಾಜ್ಯದ ಪೊಲೀಸರು ತನಿಖೆ ನಡೆಸಿಲ್ಲ. ಈಗ ಮಹಾರಾಷ್ಟ್ರ ಪೊಲೀಸರು ಆರೋಪಿಯನ್ನು ಬಂಽಸಿದ್ದಾರೆ. ಕರ್ನಾಟಕ ಪೊಲೀಸರು ಇದುವರೆಗೆ ಏನು ಮಾಡುತ್ತಿದ್ದರು? ಆರೋಪಿಗಳಿಗೆ ರಾಜಕೀಯವಾಗಿ ಯಾರ ಆಶೀರ್ವಾದ ಇತ್ತು? ಸ್ಥಳೀಯರಾದ ಅಲ್ಲಮ ಪ್ರಭು ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಆಪ್ತನಾದ ಆರೋಪಿ ವಿರುದ್ಧ ರಾಜ್ಯ ಪೊಲೀಸರು ಏಕೆ ಕ್ರಮ ಕೈಗೊಂಡಿರಲಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
ಪ್ರಕರಣದ ಹಿಂದೆ ಸ್ಥಾಪಿತ ಹಿತಾಸಕ್ತಿಗಳು, ದೊಡ್ಡವರ ಕೈವಾಡವಿದೆ. ಪ್ರಕರಣವನ್ನು ಸರಕಾರ ಲಘುವಾಗಿ ಪರಿಗಣಿಸಿದೆ. ಇಷ್ಟು ದೊಡ್ಡ ಪ್ರಕರಣವನ್ನು ವಿಷಯಾಂತರ ಮಾಡಲು ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಪ್ರಕರಣವೊಂದರಲ್ಲಿ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ ಇದುವರೆಗೆ ಕ್ರಮ ಕೈಗೊಂಡಿಲ್ಲ. ಸದಾ ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಮಾತನಾಡಿ, ನಮಗೆಲ್ಲರಿಗೂ ಸ್ವಾಮೀಜಿಯಂತೆ ಉಪದೇಶ ನೀಡುವ ರಿಪಬ್ಲಿಕ್ ಆ- ಕಲಬುರಗಿಯ ಪ್ರಿಯಾಂಕ್ ಖರ್ಗೆ ಅವರು ಡ್ರಗ್ಸ್ ವಿಚಾರದಲ್ಲಿ ಮಾತನಾಡುತ್ತಿಲ್ಲ. ಕಲಬುರಗಿಯಲ್ಲಿ ಡ್ರಗ್ಸ್ ವಿರುದ್ಧ ಕ್ರಮ ಕೈಗೊಳ್ಳದಂತೆ ಕಾಂಗ್ರೆಸ್ ಮುಖಂಡರ ಒತ್ತಡವಿದೆ ಎಂಬ ಅನುಮಾನ ಇದೆ. ಈ ಬಗ್ಗೆ ಪ್ರಿಯಾಂಕ್ ಅವರು ಸ್ಪಷ್ಟನೆ ನೀಡಬೇಕು ಎಂದರು.
‘ಡ್ರಗ್ಸ್ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಮಂಗಳೂರನ್ನು ಉಡ್ತಾ ಪಂಜಾಬ್‌ನಂತೆ ಆಗಲು ಬಿಡುವುದಿಲ’ ಎಂದು ಗೃಹ ಸಚಿವರು ಇತ್ತೀಚೆಗೆ ಮಂಗಳೂರಿನಲ್ಲಿ ಹೇಳಿದ್ದರು. ಆದರೆ, ರಾಜ್ಯದಲ್ಲಿ ಡ್ರಗ್ಸ್ ಪೂರೈಕೆ ನಿರಂತರವಾಗಿ ನಡೆಯುತ್ತಿದೆ. ಶಿಕ್ಷಣ ಸಂಸ್ಥೆಗಳು ಅಽಕವಾಗಿರುವ ಮಂಗಳೂರಿಗೆ ವಿಶಾಖಪಟ್ಟಣ, ಬೆಂಗಳೂರು, ಕೇರಳದಿಂದ ಡ್ರಗ್ಸ್ ಪೂರೈಕೆ ಆಗುತ್ತಿದೆ. ಈಗ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಡ್ರಗ್ಸ್ ಬರುತ್ತಿದೆ. ಪೊಲೀಸರು ಒಮ್ಮೆ ಕಾರ್ಯಾಚರಣೆ ನಡೆಸಿ, ಒಂದಿಬ್ಬರನ್ನು ಬಂಽಸಿ ಸುಮ್ಮನಾಗುತ್ತಾರೆ. ಡ್ರಗ್ಸ್ ಜಾಲವನ್ನು ಸಂಪೂರ್ಣ ಮಟ್ಟಹಾಕಬೇಕು. ಕೋಮು ನಿಗ್ರಹ ದಳಕ್ಕೆ ಜಿಲ್ಲೆಯಲ್ಲಿ ಕೆಲಸವಿಲ್ಲ. ಕೋಮು ನಿಗ್ರಹ ದಳದ ಪೊಲೀಸರನ್ನು ಡ್ರಗ್ಸ್ ವಿರುದ್ಧ ಬಳಕೆ ಮಾಡಲಿ ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡ ವಿಕಾಸ್ ಪುತ್ತೂರು, ಜಿಲ್ಲಾ ವಕ್ತಾರ ರಾಜಗೋಪಾಲ ರೈ, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಉಪಸ್ಥಿತರಿದ್ದರು.
ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್, ಬಿಜೆಪಿಯನ್ನು ಸದಾ ಬಯ್ಯುತ್ತಿರುತ್ತಾರೆ. ತನಗೆ ಎಲ್ಲ ವಿಷಯಗಳು ಗೊತ್ತಿದೆ, ಗೊತ್ತಿಲ್ಲದ ವಿಷಯವೇ ಇಲ್ಲ ಎಂಬ ‘ಸರ್ವಜ್ಞ ಸಿಂಡ್ರೋಮ್’ ಪ್ರಿಯಾಂಕ್ ಅವರಿಗಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ಶಾಸಕರು ಯಾವುದೇ ಇಲಾಖೆ ಬಗ್ಗೆ ಮಾತನಾಡಿದರೂ ಅವರು ಮಧ್ಯಪ್ರವೇಶ ಮಾಡಿ ಉತ್ತರ ನೀಡುತ್ತಾರೆ. ಆದರೆ, ತನ್ನ ಆಪ್ತ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದಿರೂ ಅವರು ಸುಮ್ಮನಿದ್ದಾರೆ. ಕರ್ನಾಟಕದಲ್ಲಿ ಡ್ರಗ್ಸ್ ಜಾಲದ ಕಿಂಗ್‌ಪಿನ್ ಅವರೇ ಆಗಿರಬಹುದು. ತಕ್ಷಣ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮರ್ಪಕ ತನಿಖೆಗೆ ಅವಕಾಶ ಮಾಡಿಕೊಡಬೇಕು. ಈ ವಿಚಾರವನ್ನು ವಿಧಾನಸಭೆ ಅಽವೇಶನದಲ್ಲೂ ಪ್ರಸ್ತಾಪಿಸಲಾಗುವುದು ಎಂದು ಡಾ. ಭರತ್ ಶೆಟ್ಟಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪುಕಲ್ಲು ಸಮಸ್ಯೆಗೆ ಬಿಜೆಪಿ ಕಾರಣ, ಬಿಜೆಪಿ ಶಾಸಕರು ಸರಕಾರದ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂಬ ಮಾಜಿ ಸಚಿವ ರಮಾನಾಥ ರೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಭರತ್ ಶೆಟ್ಟಿ, ರಮಾನಾಥ ರೈ ಅವರ ಈ ಹೇಳಿಕೆಯೇ ದೊಡ್ಡ ಜೋಕ್. ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಸರಕಾರದ ಬಳಿ ದುಡ್ಡೂ ಇಲ್ಲ. ಮರಳು, ಕೆಂಪುಕಲ್ಲು ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನವರೂ ಪಾಲ್ಗೊಂಡಿದ್ದರು. ಸ್ಪೀಕರ್ ಸಹಿತ ಜಿಲ್ಲೆಯ ಕಾಂಗ್ರೆಸ್‌ನ ಘಟಾನುಘಟಿ ಶಾಸಕರು ಈ ಬಗ್ಗೆ ಸರಕಾರದ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಲಿ. ಬಿಜೆಪಿ ಸರಕಾರದ ಇದ್ದಾಗ ಅರ್ಜಿ ಸಲ್ಲಿಸಿದ ವಾರದೊಳಗೆ 272 ಪರವಾನಿಗೆ ನೀಡಲಾಗಿತ್ತು ಎಂದರು.