
ಉದ್ಯಮಿ, ನವೋದ್ಯಮಿಗಳಿಗೆ ನೆರವಾಗಲು ‘ಬೊಲ್ಪು’: ಸಂಸದ ಕ್ಯಾ.ಬ್ರಿಜೇಶ್ ಚೌಟ
ಮಂಗಳೂರು: ಉದ್ಯಮಿಗಳಿಗೆ ಮಾತ್ರವಲ್ಲ ನವೋದ್ಯಮಿಗಳಿಗೆ ಸೂಕ್ತ ನೆರವು, ಮಾರ್ಗದರ್ಶನ ನೀಡುವ ವೇದಿಕೆಯಾಗಿ ‘ಬೊಲ್ಪು’ ಉದಯಿಸಿದೆ. ಇದರ ಮೂಲಕ ಮುಂದಿನ ಐದು ವರ್ಷಗಳಲ್ಲಿ ಹೊಸ ಯಶೋಗಾಥೆಗಳನ್ನು ಸೃಷ್ಟಿಸುವ ಉದ್ದೇಶ ಹಾಕಿಕೊಳ್ಳಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಶನಿವಾರ ‘ಬೊಲ್ಪು’ ಸಂಘಟನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಂಗಳೂರು ಹಲವು ಉದ್ಯಮಗಳನ್ನು ನೋಡಿದೆ, ಬೀಡಿಯಿಂದ ತೊಡಗಿ ಗೋಡಂಬಿ ವಹಿವಾಟಿನ ವರೆಗೂ ನಮ್ಮಲ್ಲಿ ಹಲವು ಯಶಸ್ವಿ ಉದ್ಯಮಿಗಳಿದ್ದಾರೆ. ಇದು ಸ್ಫೂರ್ತಿದಾಯಕ. ಇದು ಇಷ್ಟಕ್ಕೇ
ನಿಲ್ಲಬಾರದು, ಉದ್ಯಮಗಳು ಮತ್ತಷ್ಟು ಯಶಸ್ಸು ಕಾಣಬೇಕು ಹಾಗೂ ಪರಿಧಿಯನ್ನು ಮೀರಿ ಬೆಳೆಯಬೇಕು ಎಂಬ ಕಾರಣಕ್ಕೆ ಹಾಗೂ ಹೊಸ ಉದ್ಯಮಿಗಳಿಗೆ ನೆರವಾಗಲು ‘ಬೊಲ್ಪು’ ಎನ್ನುವ ಪರಿಕಲ್ಪನೆಯನ್ನು ತರಲಾಗಿದೆ ಎಂದರು.
ನಾನು ಇಸ್ರೇಲಿನ ರಾಯಭಾರಿಯವರನ್ನು ಭೇಟಿಯಾಗಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಸೀಮಿತ ಪ್ರಮಾಣದಲ್ಲಿರುವ ಕೃಷಿಭೂಮಿಯನ್ನು ಪರಿಣಾಮಕಾರಿಯಾಗಿ ಕೃಷಿಗೆ ಬಳಕೆ ಮಾಡುವುದಕ್ಕೆ ಇಸ್ರೇಲ್ ತಂತ್ರಜ್ಞಾನದ ಉಪಯೋಗದ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯವಾಗಿ ಮಹಿಳೆಯರು ತಮ್ಮ ಸಣ್ಣ ಭೂಮಿಯಲ್ಲೂ ತರಕಾರಿ-ಹಣ್ಣು ಬೆಳೆಸಿ ರಫ್ತು ಮಾಡುವುದಕ್ಕೆ ಉತ್ತೇಜನ ಕೊಡಬಹುದು, ಅಂತಹ ಕಾರ್ಯಕ್ಕೂ ಬೊಲ್ಪು ನೆರವಾಗಲಿದೆ. ಕೇವಲ ಕೆಟ್ಟಕಾರಣಗಳಿಗೆ ಮಂಗಳೂರು ಸುದ್ದಿಯಾಗುತ್ತಿದೆ, ಅದರ ಬದಲಿಗೆ ಇಂತಹ ಸ್ಫೂರ್ತಿದಾಯಕ ವಿಚಾರಗಳು ಪ್ರಚಾರ ಪಡೆಯಬೇಕಿದೆ ಎಂದರು.
ಉದ್ಯಮಶೀಲರಿಗಾಗಿ ನೆರವಾಗಲಿ ಪ್ರಧಾನಿ ಮೋದಿಯವರ ಮುತುವರ್ಜಿಯಲ್ಲಿ ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಮುದ್ರಾ ಸಾಲ ಯೋಜನೆಯಂತಹ ಹಲವು ಕಾರ್ಯಕ್ರಮಗಳಿವೆ.
ಅವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಎರಡನೇ ಸ್ತರದ ನಗರಗಳು ಕೂಡಾ ಮುಂಚೂಣಿಗೆ ಬರಬೇಕು ಎನ್ನುವ ಪ್ರಧಾನಿಯವರ ಕನಸಿಗೆ ಪೂರಕವಾಗಿ ಈ ಬೊಲ್ಪು ಕೆಲಸ ಮಾಡಲಿದೆ.
ಇದಕ್ಕಾಗಿ ಕೈಗಾರಿಕೋದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡಲಾಗುವುದು ಎಂದು ಕ್ಯಾ.ಬ್ರಿಜೇಶ್ ಚೌಟ ವಿವರಿಸಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎಲ್ಲ ಸಂಪನ್ಮೂಲಗಳೂ ಇವೆ, ಯಶಸ್ವಿ ಉದ್ಯಮಿಗಳಿದ್ದಾರೆ. ಆದರೆ ಯುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಯಾವುದೇ ಉದ್ಯಮಕ್ಕೆ ಇನ್ನಷ್ಟು ಅವಕಾಶ ಕಲ್ಪಿಸಿದರೆ ಅದು ಬಹಳ ದೊಡ್ಡದಾಗಿ ಬೆಳೆಯಬಹುದು. ಹೊಸ ಉದ್ಯಮಿಗಳಿಗೆ ಅವಕಾಶ ಕೊಟ್ಟರೆ ಜಿಲ್ಲೆ ಅಭಿವೃದ್ಧಿಯಾಗಬಹುದು ಎನ್ನುವ ದೂರದೃಷ್ಟಿ ಹೊಂದಿದ್ದಾರೆ, ಇದು ಉತ್ತಮ ಪರಿಕಲ್ಪನೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಬೊಲ್ಪು ವೇದಿಕೆಯ ಕಾರ್ಯನಿರ್ವಾಹಕ ಪಾಲುದಾರರಾದ ಜಾನ್ಸನ್, ರೋಹಿತ್ ಉಪಸ್ಥಿತರಿದ್ದರು.