
ಧರ್ಮಸ್ಥಳ ಪ್ರಕರಣ: ಅಗೆದ ಐದು ಸ್ಥಳದಲ್ಲಿ ದೊರೆಯದ ಕಳೇಬರ ಅವಶೇಷ-ಸ್ಥಳದಲ್ಲಿತ್ತು ಹರಿದ ರವಿಕೆ, ಪಾನ್, ಡೆಬಿಟ್ ಕಾರ್ಡ್
ಮಹತ್ವದ ಸಾಕ್ಷ್ಯ..
ಮೊದಲನೇ ಗುರುತಿನ ಸ್ಥಳವನ್ನು ಅಗೆಯುವ ವೇಳೆ ಸೈಟ್ ಸಂಖ್ಯೆ 1ರಲ್ಲಿ ಎಸ್‌ಐಟಿ ಮಹತ್ವದ ಸಾಕ್ಷ್ಯಗಳನ್ನು ಪತ್ತೆ ಹಚ್ಚಿದೆ ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಎನ್. ತಿಳಿಸಿದ್ದಾರೆ.
ಎಸ್‌ಐಟಿಯ ಕಾರ್ಯಾಚರಣೆಯು ಪ್ರಕರಣದಲ್ಲಿ ಹೊಸ ಬೆಳವಣಿಗೆಗೆ ದಾರಿ ತೆರೆದಿದೆ. ಮಂಗಳವಾರದ ಕಾರ್ಯಚರಣೆಯ ವೇಳೆ ಸುಮಾರು 2.5 ಅಡಿ ಆಳದಲ್ಲಿ ಕೆಂಪು ಬಣ್ಣದ ರವಿಕೆ, ಪಾನ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯು ತನಿಖೆಗೆ ಹೊಸ ಆಯಾಮ ನೀಡಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೊಹಂತಿ ಭೇಟಿ..
ಎಸ್.ಐ.ಟಿ ಕಾರ್ಯಾಚರಣೆ ನಡೆಯುತ್ತಿರುವ ನೇತ್ರಾವತಿ ಸ್ಥಳಕ್ಕೆ ಸಂಜೆ ಎಸ್.ಐ.ಟಿ ಮುಖ್ಯಸ್ಥ ಡಾ. ಪ್ರಣಬ್ ಮೊಹಂತಿ, ಐಪಿಎಸ್ ಅನುಚೇತ್, ಎಸ್ಪಿ ಸಿ.ಎ. ಸೈಮನ್ ಭೇಟಿ ನೀಡಿದರು. ಗುರುತಿಸಿದ ನಾಲ್ಕನೇ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಮರಳಿದ್ದಾರೆ. ಈ ನಡುವೆ ಅನಾಮಿಕ ದೂರುದಾರ ಮೊಹಂತಿ ಉಪಸ್ಥಿತಿಯಲ್ಲಿ ಸ್ಥಳ ಅಗೆಯುವ ಪ್ರಕ್ರಿಯೆ ನಡೆಯಬೇಕೆಂದು ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ.
ಪೊಲೀಸರ ಪಟ್ಟಿ ಕೇಳಿದ ಎಸ್‌ಐಟಿ
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 1995ರಿಂದ 2014ರ ವರೆಗೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಸಿಬಂದಿಯ ಪಟ್ಟಿ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕೇಳಿದ್ದಾರೆ ಎನ್ನಲಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಹೆಸರು..
ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ಕೇಳಿ ಬಂದಿದೆ. ವಿಚಾರಣೆ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿಯ ಬಗ್ಗೆ ಅನಾಮಿಕ ದೂರುದಾರ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಎಸ್‌ಐಟಿ ವಿಚಾರಣೆಯಲ್ಲಿ ದೂರುದಾರ ಹಲವರ ಹೆಸರನ್ನು ಉಲ್ಲೇಖಿಸಿದ್ದಾನೆ. ಅದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಇದೆ. ದೂರುದಾರ ನೀಡಿದ್ದ ಮಾಹಿತಿ ಪ್ರಕಾರ ಧರ್ಮಸ್ಥಳ ಭಾಗದಲ್ಲಿ ಪೊಲೀಸ್ ಔಟ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ದೂರುದಾರ ಉಲ್ಲೇಖಿಸಿರುವ ಹಲವರನ್ನು ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ. ಜೊತೆಗೆ ಆ ಪೊಲೀಸ್ ಅಧಿಕಾರಿಯನ್ನೂ ಎಸ್‌ಐಟಿ ವಿಚಾರಣೆ ಮಾಡುವ ಸಾಧ್ಯತೆ ಇದೆ. ಮತ್ತೊಂದು ಕಡೆ ತನಿಖಾಧಿಕಾರಿಗಳು ಆರೋಪಕ್ಕೆ ಸಂಬಂಧಿಸಿ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.