ಆ.1 ರಂದು  ಮಂಗಳೂರಿನಲ್ಲಿ ರಾಜ್ಯ ಮಟ್ಟದ 15ನೇ ಭಾರತೀಯ ಅಂಗಾಂಗ ದಾನ ದಿನಾಚರಣೆ

ಆ.1 ರಂದು ಮಂಗಳೂರಿನಲ್ಲಿ ರಾಜ್ಯ ಮಟ್ಟದ 15ನೇ ಭಾರತೀಯ ಅಂಗಾಂಗ ದಾನ ದಿನಾಚರಣೆ


ಮಂಗಳೂರು: ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ, ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಸೋಟೋ) ಇದರ ವತಿಯಿಂದ 15ನೇ ಭಾರತೀಯ ಅಂಗಾಂಗ ದಾನ ದಿನಾಚರಣೆ ಸಲುವಾಗಿ ರಾಜ್ಯ ಮಟ್ಟದ ಅಂಗಾಂಗ ದಾನ-ಜೀವನ ಸಂಜೀವಿನಿ ಅಭಿಯಾನ  ಕಾರ್ಯಕ್ರಮ ಆಗಸ್ಟ್ 1 ರಂದು ದೇರಳಕಟ್ಟೆ ಯೇನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಎಂಡ್ಯೂರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದರು.

ಅವರು ಇಂದು ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. 

ಬೆಳಗ್ಗೆ 11 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಗಮಿಸಲಿದ್ದಾರೆ. ಇವರಲ್ಲದೆ ಜಿಲ್ಲೆಯ ಶಾಸಕರು, ಸಂಸದರು ಮತ್ತಿತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ  ಎಂದರು. 

ರಾಜ್ಯಕ್ಕೆ 3ನೇ ಸ್ಥಾನ: 

ಈ ಸಂದರ್ಭ ದ.ಕ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಸೇರಿದ ಮಂಗಳೂರು ವಲಯದಲ್ಲಿ ಅಂಗಾಂಗ ದಾನಕ್ಕೆ ವಾಗ್ದಾನ  ಮಾಡಿದ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ. ಅಂಗಾಂಗ ದಾನದಲ್ಲಿ ಜುಲೈ 30ರ ವರೆಗೆ ರಾಜ್ಯದಲ್ಲಿ 43,221 ಮಂದಿ ನೋಂದಣಿ ಮಾಡಿದ್ದು, ಕರ್ನಾಟಕ ರಾಷ್ಟ್ರ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ 11,186 ಮಂದಿ ಪ್ರತಿಜ್ಞೆ ಮಾಡಿ ರಾಜ್ಯದಲ್ಲೇ ಮೊದಲ ಸ್ಥಾನ, ದ.ಕ. ನಾಲ್ಕನೇ ಸ್ಥಾನ  ಪಡೆದಿದೆ ಎಂದರು.

ಅಂಗಾಂಗ ದಾನಕ್ಕೆ ಮುಂದೆ ಬನ್ನಿ:

ಮಿದುಳು ನಿಷ್ಕ್ರಿಯಗೊಂಡ ಹಾಗೂ ಮೃತಪಟ್ಟ ಸಂದರ್ಭ ಮಾತ್ರ ಅಂಗಾಂಗ ದಾನಕ್ಕೆ ಅವಕಾಶ ಇದೆ. ಪ್ರತಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವಸಾರ್ಥಕತೆ ಸಂಸ್ಥೆ  ಅಂಗಾಂಗ ದಾನ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ಒಪ್ಪಿಗೆ ಸೂಚಿಸಲಾಗುತ್ತದೆ. ಬೆಂಗಳೂರು ವಲಯದಲ್ಲಿ 51, ಮಂಗಳೂರಲ್ಲಿ 12, ಹುಬ್ಬಳ್ಳಿ/ ಧಾರವಾಡ 7, ಕಲಬುರಗಿ 4 ಹಾಗೂ ಮೈಸೂರಿನ 8 ಕಡೆ ಸೇರಿ 82 ಕಡೆಗಳಲ್ಲಿ ಆಸ್ಪತ್ರೆಗಳು ಇವೆ. ಈ ಸಾಲಿನಲ್ಲಿ ಈಗಾಗಲೇ 121 ಅಂಗಾಂಗ ದಾನ ನಡೆದಿದೆ. ಅಂಗಾಂಗ ದಾನ  ಮಾಡಿದವರಿಗೆ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುತ್ತದೆ. ಅಂಗಾಂಗ ದಾನ ಉತ್ತೇಜನಕ್ಕಾಗಿ ರೀಲ್ಸ್ ಸ್ಪರ್ಧೆ, ಡ್ರಾಯಿಂಗ್ ಹಾಗೂ ಪೋಸ್ಟರ್ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್, ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕ ಡಾ.ದುರ್ಗಾಪ್ರಸಾದ್, ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್, ಜಿಲ್ಲಾ ಸಾಂಕ್ರಾಮಿಕ ರೋಗ ನಿರ್ವಾಹಕಗಳ ಅಧಿಕಾರಿ ಡಾ.ಜೆಸಿಂತಾ, ಕುಷ್ಠರೋಗ ನಿವಾರಣಾ ಅಧಿಕಾರಿ ಡಾ.ಸುದರ್ಶನ್, ಜೀವನ ಸಾರ್ಥಕ ಮಂಗಳೂರು ವಲಯ ಸಂಯೋಜಕಿ ಪದ್ಮಾ ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article