
ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ರಾಜ್ಯ ಮಟ್ಟದ ‘ಸ್ಕಿಲ್ ಎಕ್ಸ್‌ಪೋ ಮತ್ತು ಗೈಡೆನ್ಸ್ ಫೆಸ್ಟಿವಲ್-2025’ಗೆ ಚಾಲನೆ
Wednesday, July 30, 2025
ಮಂಗಳೂರು: ಸಿಬಿಎಸ್‌ಇ ಬೋರ್ಡ್ ವತಿಯಿಂದ ಆಯೋಜಿಸಲ್ಪಟ್ಟ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ಸ್ಕಿಲ್ ಎಕ್ಸ್‌ಪೋ ಮತ್ತು ಗೈಡೆನ್ಸ್ ಫೆಸ್ಟಿವಲ್-2025 ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಇಂದು ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಇಂಡಿಯಾನ ಹಾಸ್ಪಿಟಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಹೃದಯ ತಜ್ಞ ಯೂಸುಫ್ ಎ. ಕುಂಬ್ಳೆ ಅವರು ಉದ್ಘಾಟಿಸಿ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ನಾನು ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಲ್ಲಿ ತುಂಬಾ ಆಸಕ್ತಿ ಹೊಂದಿದ್ದೆ. ಅದೇ ರೀತಿ ಮಕ್ಕಳಾದ ನೀವು ಕೂಡ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸುತ್ತ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆಯನ್ನು ನೀಡಬಹುದು. ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ ಎಂದು ಹೇಳಿದರು.
ಈ ಸ್ಕಿಲ್ ಎಕ್ಸ್‌ಪೋ ಮೂಲಕ ಜ್ಞಾನ, ಶಿಕ್ಷಣ, ವೃತ್ತಿಪರ ಅಭಿವೃದ್ಧಿ ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನೆ ಈ ರೀತಿಯ ಉತ್ತಮ ಅಂಶಗಳನ್ನು ನೀವು ಕಲಿಯಬಹುದು. ನಾನು ಒಬ್ಬ ವೃತ್ತಿಯಲ್ಲಿ ವೈದ್ಯನಾಗಿದ್ದು ಈ ಅಂಶಗಳ ಪ್ರವರ್ತಕನಾಗಿದ್ದೇನೆ. ಗೈಡೆನ್ಸ್ ಉತ್ಸವದಲ್ಲಿ ಮಾತನಾಡುವ ಸಂಪನ್ಮೂಲ ವ್ಯಕ್ತಿಗಳ ಮಾತುಗಳಿಂದ ನೀವು ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಶಾಲೆಯಲ್ಲಿ ಗಳಿಸುವ ಅಂಕಗಳು ಭವಿಷ್ಯದಲ್ಲಿ ನಮ್ಮ ವೃತ್ತಿಯ ಬಾಗಿಲನ್ನು ತೆರೆದರೆ. ನಮ್ಮ ಕೌಶಲ್ಯಗಳು ಆ ಬಾಗಿಲನ್ನು ಸದಾ ತೆರೆದಿರುವಂತೆ ಮಾಡುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ದ.ಕ. ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ದೆಹಲಿಯಿಂದ ಆನ್‌ಲೈನ್‌ನ ಮೂಲಕ ಭಾಗವಹಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಜಾರಿಗೆ ತಂದಿರುತ್ತಾರೆ. ಇದರಲ್ಲಿ ಸ್ಕೀಲ್‌ಗೆ ಸಂಬಂಧಿಸಿದಂತೆ ಸಿಬಿಎಸ್‌ಇ ಬೋರ್ಡ್ ರಾಜ್ಯಮಟ್ಟದ ಶೈಕ್ಷಣಿಕ ಸ್ಕಿಲ್ ಎಕ್ಸ್‌ಪೋ ಮತ್ತು ಗೈಡೆನ್ಸ್ ಫೆಸ್ಟಿವಲ್-2025ನ್ನು ಮಂಗಳೂರಿನ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಆಯೋಜಿಸಿರುವುದು ಅಭಿನಂದನೀಯ ಕಾರ್ಯವಾಗಿದೆ. ಈ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಇದು ಸಹಕಾರಿಯಾಗುತ್ತದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೌಶಲ್ಯ ಅಭಿವೃದ್ಧಿ, ಸಿಬಿಎಸ್‌ಇ ಬೋರ್ಡ್‌ನ ಉಪ ಕಾರ್ಯದರ್ಶಿ ಸತೀಶ್ ಪೆಹಲ್ ಮಾತನಾಡಿ, ‘ಮಕ್ಕಳ ಕೌಶಲ್ಯವನ್ನು ಪ್ರದರ್ಶಿಸಲು ಈ ಸ್ಕಿಲ್ ಎಕ್ಸ್‌ಪೋ ಒಂದು ಉತ್ತಮವಾದ ವೇದಿಕೆಯಾಗಲಿದೆ. ಇದನ್ನು ಸದುಪಯೋಗಪಡಿಸಕೊಳ್ಳಬೇಕು. ಸಮಾಜದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಬೇಕಾದ ಮಾರ್ಗದರ್ಶನವನ್ನು ಪರಿಣಿತರಿಂದ ಈ ಗೈಡೆನ್ಸ್ ಉತ್ಸವದಲ್ಲಿ ಕಲಿತುಕೊಳ್ಳಬೇಕು. ಯಾವುದೇ ಒಂದು ವಿಜ್ಞಾನ ಮಾದರಿಯು ರಚಣೆಯಾಗಬೇಕಾದರೆ ಅದು ತಮ್ಮ ತಮ್ಮ ಸಹಾನುಭೂತಿಯೊಂದು ಮಾಡಿರಬೇಕು. ಅದರಿಂದ ಜನ ಸಮುದಾಯಕ್ಕೆ ಆಗುವ ಅನುಕೂಲವನ್ನು ನಾವು ತಿಳಿದಿರಬೇಕು. ನಿಮ್ಮ ವಿಜ್ಞಾನ ಮಾದರಿಗಳ ಪ್ರದರ್ಶನಕ್ಕೆ ಶಾಲೆಗಳು ಮತ್ತು ಬೋರ್ಡ್ ನಿಮಗೆ ಸಹಕರಿಸುತ್ತದೆ ಎಂದು ಹೇಳಿದರು.
ಗೈಡೆನ್ಸ್ ಉತ್ಸವದಲ್ಲಿ ಭಾಗವಹಿಸಿದ್ದ ‘ಲೈಫೋಲಾಜಿ’ ಸಂಸ್ಥೆಯ ಸಹ ಸಂಸ್ಥಾಪಕ ರಾಹುಲ್ ಜೆ. ನಾಯರ್ ಅವರು ಅರ್ಥಪೂರ್ಣ ವೃತ್ತಿ ಮತ್ತು ವ್ಯಕ್ತಿತ್ವ ಎಂಬ ವಿಷಯದ ಕುರಿತು ಮಾತನಾಡಿದರು. ಖ್ಯಾತ ಮೈಂಡ್ ಟ್ರೈನರ್ ಆಗಿರುವ ತನುಜಾ ಅವರು ಮೈಂಡ್ ಮ್ಯಾಟರ್-ಸಂತೋಷಧಾಯಕ ಮತ್ತು ಆರೋಗ್ಯಯುತವಾದ ಮೆದುಳನ್ನು ಹೊಂದಲು ಸರಳ ಸೂತ್ರಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಸಮಾಜ ಸೇವಕರು ಮತ್ತು ಖ್ಯಾತ ಉದ್ಯಮಿ ಯು.ಕೆ. ಯೂಸುಫ್ ಅವರು ಭವಿಷ್ಯದ ಸಿದ್ಧತೆ-ಭವಿಷ್ಯದ ನಿರ್ಮಾಣಕ್ಕಾಗಿ ಮುಂದಿನ ಜನಾಂಗವನ್ನು ಕೌಶಲ್ಯ ಭರಿತರನ್ನಾಗಿಸುವುದು ಎಂಬ ವಿಷಯದ ಕುರಿತು ಮಾತನಾಡಿದರು.
ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಯ್ಕ್ ಮಾತನಾಡಿ, ಇದೊಂದು ಹಬ್ಬ. ಇಲ್ಲಿ ಮಕ್ಕಳಿಗೆ ವಿವಿಧ, ಕೌಶಲ್ಯಗಳನ್ನು ವಿವಿಧ ಪ್ರದೇಶಗಳ ಸಂಸ್ಕೃತಿ ಭಾಷೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಮತ್ತು ಕಲಿಯುವ ಅವಕಾಶ ಆಗಲಿದೆ. ಇವತ್ತಿನ ಆಧುನಿಕ ಕಾಲದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ಗೆ ಉತ್ತಮವಾದ ಬೇಡಿಕೆಯಿದೆ. ರಾಜ್ಯ ಮತ್ತು ದೇಶದ ನಾನಾ ಕೆಡೆಗಳಿಂದ ಆಗಮಿಸಿದ ಎಲ್ಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಪೋಷಕರಿಗೆ ನಮ್ಮ ಶಕ್ತಿ ವಿದ್ಯಾ ಸಂಸ್ಥೆಗೆ ಸ್ವಾಗತ. ಸಿಬಿಎಸ್‌ಇ ಬೋರ್ಡ್‌ನ ಈ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿ ಹಮ್ಮಿ ಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಇದರಿಂದ ಮಕ್ಕಳು ತಮ್ಮ ತಮ್ಮ ಕೌಶಲ್ಯಗಳನ್ನು ಸಮಾಜದ ಮುಂದೆ ಪ್ರದರ್ಶಿಸಲು ಒಳ್ಳೆಯ ಅವಕಾಶವಾಗಲಿದೆ. ಈ ಉತ್ಸವವವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಉತ್ಸವದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸಿಬಿಎಸ್‌ಇ ಬೋರ್ಡ್‌ನ ಶಾಲಾ ಮಕ್ಕಳಿಂದ ತಯಾರಾಗಿ ಬಂದಿದ್ದ 80ಕ್ಕೂ ಹೆಚ್ಚಿನ ವಿಜ್ಞಾನ ಮಾದರಿಗಳಲ್ಲಿ ಅಯ್ಕೆಯಾದ 31 ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳು ಪ್ರದರ್ಶಿಸಲ್ಪಟ್ಟವು ಮತ್ತು ಗೈಡೆನ್ಸ್ ಉತ್ಸವದಲ್ಲಿ ವಿವಿಧ ಶಾಲೆಗಳಿಂದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದು ವಿಶೇಷವಾಗಿತ್ತು.
ಹುಲಿ ವೇಷಧಾರಿ ಮಕ್ಕಳು ಹುಲಿಯ ಕುಣಿತದೊಂದಿಗೆ ಅತಿಥಿಗಳನ್ನು ಬರಮಾಡಿಕೊಂಡರೆ, ಯಕ್ಷಗಾನದ ಕುಣಿತದ ಮೂಲಕ ವಿದ್ಯಾರ್ಥಿಗಳು ಅತಿಥಿ ಅಭ್ಯಾಗತರನ್ನು ಸಭೆಗೆ ಸ್ವಾಗತಿಸಿದ್ದು ಆಕರ್ಷಣೀಯವಾಗಿತ್ತು.
ಈ ಉತ್ಸವದಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾಕ್ಟರ್ ಸುಷ್ಮಾ ವಿ. ಮತ್ತು ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ತಿಕ್ ರಾಜ್ ಕುದ್ರೋಳಿ ಅವರು ನಿರ್ಣಯಕರಾಗಿ ಆಗಮಿಸಿ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ತೀರ್ಪು ನೀಡಿದರು.
ಶಕ್ತಿ ರೆಸಿಡೆನ್ಸಿಯಲ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಪ್ರಭಾಸ್ ಮತ್ತು ವರ್ಜಸ್ ಇವರು ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರ ಸಂದರ್ಶನವನ್ನು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ವಹಿಸಿದ್ದರು. ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹೆಚ್. ಉಪಸ್ಥಿತರಿದ್ದರು.
ಶಕ್ತಿ ರೆಸಿಡೆನ್ಸಿಯಲ್ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿದರು. ಶಿಕ್ಷಕಿ ಚೇತನಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಶಿಕ್ಷಕಿಯರಾದ ಚೇತನಾ ಮತ್ತು ಸ್ಮಿಷ್ಮಾ ಅವರು ಈ ಫೆಸ್ಟಿವಲ್‌ನ್ನು ಸಂಯೋಜಿಸಿದರು.