ದೇವಸ್ಥಾನಗಳ ಹುಂಡಿ ಹಣ ಅನ್ಯ ಧರ್ಮಗಳಿಗೆ ಬಳಕೆ: ಸುಳ್ಳು ಹರಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

ದೇವಸ್ಥಾನಗಳ ಹುಂಡಿ ಹಣ ಅನ್ಯ ಧರ್ಮಗಳಿಗೆ ಬಳಕೆ: ಸುಳ್ಳು ಹರಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ


ಮಂಗಳೂರು: ದೇವಸ್ಥಾನಗಳ ಹುಂಡಿಗಳ ಹಣವನ್ನು ಅನ್ಯ ಧರ್ಮಗಳಿಗೆ ಬಳಕೆ, ಸರಕಾರದ ಬೊಕ್ಕಸಕ್ಕೆ. ಎಂಬುದಾಗಿ ಸುಳ್ಳು ಹರಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ರಾಷ್ಟ್ರ ಮಟ್ಟದ ಟಿವಿ ಶೋಗಳಲ್ಲಿಯೂ ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆಯ ಬಗ್ಗೆ ಸುಳ್ಳು ಆರೋಪ ಮಾಡಲಾಗುತ್ತಿದ್ದು, ಇದಕ್ಕೆ ಕಠಿಣ ಕ್ರಮದ ಅಗತ್ಯವಿದೆ ಎಂಬ ಆಗ್ರಹ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರಿಂದ ವ್ಯಕ್ತವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ನಡೆದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ವತಿಯಿಂದ ದ.ಕ. ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಪ್ರಥಮ ಸಮಾಲೋಚನಾ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು. 

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಿನೇಶ್ಗುಂಡೂರಾವ್ ಈ ವಿಷಯ ಪ್ರಸ್ತಾಪಿಸಿ, ದೇವಸ್ಥಾನಗಳ ಹುಂಡಿಯ ದುಡ್ಡನ್ನು ಬೇರೆ ಧರ್ಮದವರಿಗೆ ಖರ್ಚು ಮಾಡಲಾಗುತ್ತದೆ ಎಂಬ ಸುಳ್ಳಿನ ಅಪಪ್ರಚಾರ ನಡೆಯುತ್ತಿದೆ. ಟಾಕ್ ಶೋಗಳಲ್ಲಿಯೂ ಇಂತಹ ಪ್ರಚಾರ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸತ್ಯವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು. 

ವೈಯಕ್ತಿಕ ಸ್ವಾರ್ಥ ಅಥವಾ ರಾಜಕೀಯ ಲಾಭಕ್ಕಾಗಿ ಭಕ್ತರನ್ನು ಬಳಸುವಂತಾಗಬಾರದು. ಅದನ್ನು ಗಮನಿಸುವ ಕಾರ್ಯ ವ್ಯವಸ್ಥಾಪನಾ ಸಮಿತಿಯದ್ದಾಗಬೇಕು. ತಸ್ತೀಕ್ ಆಗಿ ಅರ್ಚಕರಿಗೆ ವಾರ್ಷಿಕ ಹಿಂದೆ 24,000 ರೂ. ನೀಡಲಾಗುತ್ತಿತ್ತು. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಬಗ್ಗೆ ನಾನೇ ಮುಖ್ಯಮಂತ್ರಿಯವರ ಗಮನ ಸೆಳೆದಿದ್ದು, ಅದ್ನು 36,000ದಿಂದ ಬಳಿಕ 48000 ರೂ.ಗೆ ಏರಿಕೆ ಮಾಡಲಾಗಿತ್ತು. 2024-25ನೆ ಸಾಲಿನಿಂದ ನಮ್ಮ ಸರಕಾರ ಮತ್ತೆ ಅದನ್ನು 72,000 ರೂ.ಗಳಿಗೆ ಏರಿಕೆ ಮಾಡಿದೆ. ಈ ತಸ್ತೀಕ್ ಪರಿಕಲ್ಪನೆಯನ್ನು ತನ್ನ ತಂದೆ ಗುಂಡೂರಾವ್ ಆರಂಭಿಸಿದ್ದರು. ಇಂದಿಗೂ ಅದು ಬೆಳೆದು ಬಂದಿದೆ ಎಂದರು. 

ವಿಧಾನ ಪರಿಷ್ನ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಧಾರ್ಮಿಕ ಕ್ಷೇತ್ರಗಳ ಆವರಣದಲ್ಲಿ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳ ಹೊರತಾಗಿ ಇತರ ಯಾವುದೇ ಚಟುಟವಟಿಕೆಗಳಿಗೆ ಅವಕಾಶ ನೀಡಬಾರದು. ಎ ಗ್ರೇಡ್ ನ ದೇವಾಲಯಗಳ ವ್ಯವಸ್ಥಾಪನ ಸಮಿತಿಯಂತೆ ಬಿ ಮತ್ತು ಸಿ ಗ್ರೇಡ್ ದೇವಾಲಯಗಳ ಸಮಿತಿ ಸದಸ್ಯರಿಗೂ ಜಿಲ್ಲಾಡಳಿತದಿಂದ ಗುರುತಿನ ಚೀಟಿ ಒದಗಿಸಬೇಕು. ದೇವಸ್ಥಾನಗಳ ಹುಂಡಿ ಹಣವನ್ನು ಅನ್ಯ ಕಾರ್ಯಗಳಿಗೆ ಅಥವಾ ಸರಕಾರವು ಬಳಸುವುದಿಲ್ಲ ಎಂಬ ಬಗ್ಗೆ ಸೂಚನಾ ಫಲಕವನ್ನು ಅಳವಡಿಬೇಕು ಎಂದು ಸಲಹೆ ನೀಡಿದರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಧರ್ಮ ಮನಸ್ಸನ್ನು ಶುದ್ಧೀಕರಣ ಮಾಡುವವಂತದ್ದು ಹಾಗಾಗಿ ಧರ್ಮ ರಾಜಕೀಯದಿಂದ ದೂರ ಇರಬೇಕು. ಸುಳ್ಳು ವಿಚಾರಗಳನ್ನು ಹಬ್ಬಿಸುವ ಕುರಿತಂತೆ ವ್ಯವಸ್ಥಾಪನಾ ಸಮಿತಿ ಜವಾಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು. 

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಲಕ್ಷ್ಮೀಶ ಗಬ್ಲಡ್ಕ, ಕರಾವಳಿ ಧರ್ಮ, ಆಧಾತ್ಮಿಕತೆಯಿಂದ ಹೊರತಾಗಿಲ್ಲ. ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಸಂಪ್ರದಾಯಗಳಿಗೆ ಚ್ಯುತಿಯಾಗಂತೆ ವ್ಯವಸ್ಥಾಪನಾ ಸಮಿತಿ ಗಮನಹರಿಸಬೇಕು. ಕರಾವಳಿಯ ಪರಂಪರೆಯ ವೈಶಿಷ್ಯವನ್ನು ಉಳಿಸುವ ಜತೆಗೆ ನಮ್ಮ ಧರ್ಮಗಳ ಭಿನ್ನತೆಯೇ ನಮ್ಮ ಶಕ್ತಿಯಾಗಿಸಬೇಕು. ಭೂತರಾಧನೆಯಲ್ಲಿ ವೈದಿಕರ ಪ್ರವೇಶಕ್ಕೆ ಅವಕಾಶ ಬೇಡ. ಅದೇ ರೀತಿ ದೇವಸ್ಥಾನಗಳಲ್ಲಿಯೂ ಪಾರಂಪರಿಕ ವ್ಯವಸ್ಥೆಯನ್ನು ಉಳಿಸುವ ಜತೆಗೆ ರಾಜಕೀಯ ದೇವಸ್ಥಾನಕ್ಕೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಕರಾವಳಿಯ ಅನುಸೂಚಿತ ಜಾತಿ ಪಂಗಡಗಳ ಆರಾಧನಾ ಕ್ಷೇತ್ರಗಳ ಅಭಿವೃದ್ಧಿಗೆ ಗಮನ ಹರಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಬೇಕು. ರಾಜಕೀಯ ಸಿದ್ಧಾಂತದ ನಾಯಕರು ಹಿಂದೂ ಧರ್ಮದ ನಾಯಕರಲ್ಲ. ದೇವಸ್ಥಾನದ ಅರ್ಚಕರು, ದೈವಸ್ಥಾನದ ಪೂಜಾರಿಗಳು ನೈಜ ಹಿಂದೂ ಧರ್ಮದ ನಾಯಕರು ಎಂಬುದನ್ನು ಸಾರ್ವಜನಿಕ ವಲಯದಲ್ಲಿ ಮನವರಿಕೆ ಮಾಡಿಸಬೇಕು ಎಂದು ಹೇಳಿದರು. 

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬೆಳ್ತಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಘವ ಎಚ್. ಮಾತನಾಡಿದರು.

ಮಾಜಿ ಸಚಿವ ರಮಾನಾಥ ರೈ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜೆ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ನರ್ವಾಡೆ ವಿನಾಯಕ್ ಕರ್ಬಾರಿ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು. 

ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಜಯಮ್ಮ ಸ್ವಾಗತಿಸಿ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಅಧಿಕಾರಿ ಶ್ವೇತ ಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article