
ಲಾಜಿಸ್ಟಿಕ್ಸ್ ಪಾರ್ಕ್‌ಗಳ ನಿರ್ಮಾಣದ ಮೂಲಕ ಸರಕು ಸಾಗಾಣೆ ಕಾರಿಡಾರ್‌ಗೆ: ಡಾ.ಎಸ್. ಸೆಲ್ವಕುಮಾರ್
ಮಂಗಳೂರು: ರಾಜ್ಯ ಸರಕಾರದ ಮಹತ್ವದ ಕೈಗಾರಿಕಾ ನೀತಿ 2025-2030ರಲ್ಲಿ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲು ವಿಶ್ವ ದರ್ಜೆಯ ಮೂಲಭೂತ ವ್ಯವಸ್ಥೆಗಳುಳ್ಳ ಬಹುಮಾದರಿಯ ಲಾಜಿಸ್ಟಿಕ್ಸ್ ಪಾರ್ಕ್‌ಗಳ ನಿರ್ಮಾಣದ ಮೂಲಕ ಸರಕು ಸಾಗಾಣೆ ಕಾರಿಡಾರ್‌ಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ತಿಳಿಸಿದ್ದಾರೆ.
ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಎಂಬ ವಿಷಯದಲ್ಲಿ ಸಿಐಐ ಮಂಗಳೂರು ವತಿಯಿಂದ ಗುರುವಾರ ನಗರದಲ್ಲಿ ನಡೆದ ವಿಶೇಷ ಶೃಂಗಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ಜೊತೆಗೆ ಟಯರ್ 2 ಹಾಗೂ ಟಯರ್ 3 ನಗರಗಳ ಅಭಿವೃದ್ದಿಗೆ ಒತ್ತು ನೀಡಲಾಗುವುದು. ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರ್ಗಿ ನಗರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಯೋಜನೆಯನ್ನು ಸಮರ್ಪಕ ಹಾಗೂ ಸುವ್ಯವಸ್ಥಿತವಾಗಿ ಹೇಳಿದರು.
ಕಾರ್ಮಿಕ ಕಾನೂನಿನಲ್ಲಿ ಸುಧಾರಣೆ ತರಲಾಗಿದೆ. ಕೈಗಾರಿಕಾ ಸ್ಥಾಪನೆಗೆ ವಿವಿಧ ಇಲಾಖೆಗಳ ಅನು ಮೋದನೆ ಪ್ರಕ್ರಿಯೆಯನ್ನು ಸರಳೀಕೃತ ಮಾಡಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಇನ್ನಷ್ಟು ಸುಧಾರಣೆ ಆಗಬೇಕಾಗಿದೆ. ಈ ಬಗ್ಗೆ ವಿಶೇಷ ಗಮನಹರಿಸಲಾಗುವುದು. ತಲಾ ಆದಾಯದಲ್ಲಿ ದೇಶ ದಲ್ಲಿಯೇ ಕರ್ನಾಟಕ ನಂ.1 ಸ್ಥಾನದಲ್ಲಿದೆ. ಹೂಡಿಕೆ ಹಾಗೂ ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಇನ್ನಷ್ಟು ಸುಧಾರಣೆಗೆ ಎಐ ಬಳಕೆಗೆ ಗಮನಹರಿಸಲಾಗುವುದು ಎಂದರು.
ಕೈಗಾರಿಕೆಗಳ ಬೆಳವಣಿಗೆಗೆ ಕರಾವಳಿ ಭಾಗದಲ್ಲಿ ಒಳ್ಳೆಯ ಅವಕಾಶವಿದೆ. ಈ ನಿಟ್ಟಿನಲ್ಲಿ ಪೂರಕ ಕ್ರಮಗಳು ಸರಕಾರೇತರವಾಗಿ ಖಾಸಗಿ ನೆಲೆಯಿಂದಲೂ ಆಗಬೇಕಿದೆ. 5 ಸ್ಟಾರ್ ಹೊಟೇಲ್, ಅಂತಾರಾಷ್ಟ್ರೀಯ ಸ್ವರೂಪದ ಸಭಾಂಗಣ, ರೆಸಾರ್ಟ್ನಂತಹ ಕೆಲವು ಅವಕಾಶಗಳು ಹಲವು ಹೂಡಿಕೆದಾರರಿಗೆ ಅಗತ್ಯವಿದೆ. ಇದನ್ನು ಖಾಸಗಿ ನೆಲೆಯಿಂದ ಮಾಡಲು ಆದ್ಯತೆ ನೀಡಬೇಕಿದೆ. 900 ಎಕರೆ ಜಾಗ ನಗರಕ್ಕೆ ಹೊಂದಿಕೊಂಡಂತೆ ಲಭ್ಯವಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.
ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಮಾತನಾಡಿ ದ.ಕ. ಮತ್ತು ಉಡುಪಿ ಜಿಲ್ಲೆಯು ರಾಜ್ಯದ ಒಟ್ಟು ಜಿಡಿಪಿಯ ಪೈಕಿ 1.2 ಲಕ್ಷ ಕೋ.ರೂ.ಗಳ ಕೊಡುಗೆಯನ್ನು ನೀಡುತ್ತಿದೆ. ಮಂಗಳೂರಿನವರ ತಲಾ ಆದಾಯವು 4.92 ಲಕ್ಷ ರೂ. ಇದೆ. ಆದರೂ ಕರಾವಳಿ ಭಾಗದ ಅಭಿವೃದ್ದಿ ಬಗ್ಗೆ ಚರ್ಚೆ, ಅವಲೋಕನ ನಡೆಯುತ್ತದೆಯೇ ವಿನಃ ಫಲಿತಾಂಶ ಸಿಗುತ್ತಿಲ್ಲ. ರಾಜ್ಯದ ವಿವಿಧ ಭಾಗಗಳನ್ನು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ, ಸಂಪಾಜೆ ಮಳೆಗಾಲದ ಸಮಯದಲ್ಲಿ ಸಂಪರ್ಕವನ್ನೇ ಕಡಿದುಕೊಳ್ಳುವ ಪರಿಸ್ಥಿತಿಗೆ ಬಂದಿದೆ. ರಾಜ್ಯದ ವಿವಿಧ ಭಾಗದಲ್ಲಿ ರೈತರು ಬೆಳೆದ ಆಹಾರ, ತರಕಾರಿಯನ್ನು ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭ ರೈಲು ಸಂಪರ್ಕವೂ ಆಗುತ್ತಿಲ್ಲ. ವಿಮಾನ ಟಿಕೆಟ್ ದರ 10 ಸಾವಿರ ರೂ.ಗೆ ಏರಿಕೆಯಾಗುತ್ತದೆ ಎಂದು ಹೇಳಿದರು.
ನವಮಂಗಳೂರು ಬಂದರು ಕಳೆದ 5 ವರ್ಷದಲ್ಲಿ 36 ಮೆಟ್ರಿಕ್ ಟನ್ನಿಂದ 46 ಮೆಟ್ರಿಕ್ ಟನ್ ಕಾರ್ಗೊ ನಿರ್ವಹಿಸಿದೆ. ಶಿರಾಡಿ- ಸಂಪಾಜೆ ಹೆದ್ದಾರಿ ವ್ಯವಸ್ಥೆ ಉತ್ತಮವಾದರೆ 60 ಮೆಟ್ರಿಕ್ ಟನ್ ನಿರ್ವಹಣೆ ಮಾಡಲು ಸಾಧ್ಯವಿದೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಅವಕಾಶ ಲಭಿಸುತ್ತದೆ ಎಂದರು.
ವಿಶೇಷ ಸಂವಾದದಲ್ಲಿ ವೇವ್ಯೆಸ್ ಸೊಲ್ಯುಷನ್ ಸಿಇಒ ಸುಯೋಗ್ ಶೆಟ್ಟಿ, ವಿಪ್ರೊ ರಿಸರ್ಚ್‌ನ ಪ್ರಮುಖರಾದ ಜಿ.ಸುಂದರ್ರಾಮಣ್, ರೊಬೋಸಾಪ್ಟ್ನ ರೋಹಿತ್ ಭಟ್ ಮಾತನಾಡಿದರು.
ದ.ಕ. ಜಿಪಂ ಸಿಇಒ ನರ್ವಾಡೆ ವಿನಾಯಕ್ ಕರ್ಬಾರಿ, ಸಿಐಐ ಪ್ರಮುಖರಾದ ಅಭಿನವ್ ಬನ್ಸಾಲ್, ಪವನ್ ಕುಮಾರ್ ಸಿಂಗ್, ಸೊಲೊಮೆನ್ ಪುಷ್ಪರಾಜ್ ಉಪಸ್ಥಿತರಿದ್ದರು. ಸಿಐಐ ಮಂಗಳೂರು ಅಧ್ಯಕ್ಷ ನಟರಾಜ್ ಹೆಗ್ಡೆ ಸ್ವಾಗತಿಸಿದರು.