
ನಿವೃತ್ತ ಶಿಕ್ಷಕ ಕೃಷ್ಣ ನಾಯಕ್ ದಂಪತಿಗಳಿಗೆ ಶಾಸಕ ಕಾಮತ್ ಅವರಿಂದ ಗುರುವಂದನೆ
ಮಂಗಳೂರು: ಮಣ್ಣಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿ ಪ್ರಸ್ತುತ ಪಾಂಡೇಶ್ವರದಲ್ಲಿ ನೆಲೆಸಿರುವಂತಹ ಕೃಷ್ಣ ನಾಯಕ್ ದಂಪತಿಗಳ ಮನೆಗೆ ಶಾಸಕ ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ಗುರುವಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ತೋರಿದ ಗುರುಗಳು ಇವರು. ಮಣ್ಣಗುಡ್ಡ ಸರ್ಕಾರಿ ಶಾಲೆಯು ನೂರು ವರ್ಷಕ್ಕೂ ಅಧಿಕ ಇತಿಹಾಸ ಹೊಂದಿದ್ದು ಅಸಂಖ್ಯ ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನೆ ನಡೆಸಿ ಹೋಗಿದ್ದಾರೆ. ಇಂದು ಅವರೆಲ್ಲರೂ ಸುಂದರ ಬದುಕು ಕಟ್ಟಿಕೊಳ್ಳಲು ಕಾರಣ ಇಂತಹ ಶಿಕ್ಷಕರುಗಳೇ. ಶ್ರೀ ಕೃಷ್ಣ ನಾಯಕ್ ರವರ ಧರ್ಮ ಪತ್ನಿಯಾದ ಗಂಗಾ ನಾಯಕ್ ಅವರೂ ಸಹ ಶಿಕ್ಷಕಿಯಾಗಿದ್ದು ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲರಿಗೆ ಪಾಠ ಕಲಿಸಿದ್ದಾರೆ. ಇಂತಹ ಶುಭ ಸಂದರ್ಭದಲ್ಲಿ, ನಾನು ಕಲಿತ ಮಣ್ಣಗುಡ್ಡ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡಿದ್ದು, ಹಿಂದಿನ ಬಿಜೆಪಿ ಸರ್ಕಾರದ ಸಹಕಾರದಿಂದ ಶಾಲೆಗೆ ಅಗತ್ಯವಿದ್ದ ಹಲವು ವಿಶೇಷ ತರಗತಿ ಕೋಣೆಗಳನ್ನು ನಿರ್ಮಿಸಿದ್ದು, ಶಾಲೆಯ ಸಂಪೂರ್ಣ ಅಭಿವೃದ್ಧಿ ಕಾರ್ಯಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು, ಎಲ್ಲವನ್ನೂ ಮೆಲುಕು ಹಾಕಲು ಸಂತೋಷವೆನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ನಿತಿನ್ ಕಾಮತ್, ಸುನಿಲ್, ಸಂದೀಪ್ ಅಶ್ವಿತ್ ಮೆಂಡನ್, ಸೂರಜ್, ಕೀರ್ತಿ, ಪ್ರವೀಣ್, ದಯಾನಂದ್ ಹಾಗೂ ಕೃಷ್ಣ ನಾಯಕ್ ರವರ ಕುಟುಂಬಸ್ಥರು ಉಪಸ್ಥಿತರಿದ್ದರು.