
ಮಾಹಿತಿ ನೀಡದೆ ನಿಡ್ಡೋಡಿಯಲ್ಲಿ ಕೃಷಿ ಭೂಮಿ ನಾಶ: ಗ್ರಾಮಸ್ಥರು ಮತ್ತು ಕಿಸಾನ್ ಸಂಘದಿಂದ ಪ್ರತಿಭಟನೆ
Thursday, July 17, 2025
ಮೂಡುಬಿದಿರೆ: ಉಡುಪಿ-ಕಾಸರಗೋಡು ನಡುವೆ ಹಾದು ಹೋಗುವ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ಸಂಬಂಧಪಟ್ಟಂತೆ ಸ್ಟೆರ್‌ಲೈಟ್ ಕಂಪನಿಯವರು ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೆ, ನಿಡ್ಡೋಡಿ ಗ್ರಾಮದ ಕೃಷಿಕರೊಬ್ಬರ ಜಾಗಕ್ಕೆ ಪ್ರವೇಶಿಸಿ, ಕಂಗಿನ ತೋಟವನ್ನು ನಾಶ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ರೈತ ಕಿಸಾನ್ ಸಂಘದವರು ಗುರುವಾರ ಪ್ರತಿಭಟನೆ ನಡೆಸಿದರು.
ನಿಡ್ಡೋಡಿ ಗ್ರಾಮದ ದಂಬೇಸಾರ್ ಸಿಕ್ವೇರಾ ಕಾಂಪೌಂಡ್‌ನಲ್ಲಿ ಪೀಟರ್ ಸಿಕ್ವೇರಾ ಲವೀನಾ ಸಿಕ್ವೇರಾ ಅವರ ಜಾಗಕ್ಕೆ ಬಲತ್ಕಾರವಾಗಿ ಪ್ರವೇಶಿಸಿ ಫಲಭರಿತ ಮರಗಳನ್ನು ಕಡಿದಿದ್ದಾರೆ. ಹಿಟಾಚಿಯನ್ನು ತಂದು ಟವರ್ ಕಾಮಗಾರಿಯನ್ನು ಮಾಡಲು ಪ್ರಾರಂಭಿಸಿದ್ದು, ಇದನ್ನು ಅರಿತ ಗ್ರಾಮಸ್ಥರು, ಕೃಷಿಕರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ನಿಲ್ಲಿಸಿದರು.
ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಈ ಸಂದರ್ಭದಲ್ಲಿ ಮಾತನಾಡಿ, ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೆ, ಅನಾರೋಗ್ಯ ಪೀಡಿತ ಪೀಟರ್ ಸಿಕ್ವೇರ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ, ಮಂಗಳವಾರ ಕಂಪೆನಿಯವರು ಏಕಾಏಕಿ ಅವರ ಜಾಗವನ್ನು ಪ್ರವೇಶಿಸಿ ಅಕ್ರಮವಾಗಿ ಕಾಮಗಾರಿ ಮಾಡಲು ಮುಂದಾಗಿದ್ದರೆ, ಮನೆಗೆ ಹೋಗುವ ದಾರಿ ಹಾಗೂ ಫಲಭರಿತವಾದ ಕಂಗಿನ ತೋಟವನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ.ಸೂಕ್ತ ಪರಿಹಾರವನ್ನೂ ಕುಟುಂಬಕ್ಕೆ ಇನ್ನೂ ನೀಡಿಲ್ಲ. ಇದೇ ರೀತಿ ಹಲವು ಬಾರಿ ನಿಡ್ಡೋಡಿ ಗ್ರಾಮದಲ್ಲಿ ಈ ಕಂಪೆನಿಯವರು ದಬ್ಬಾಳಿಕೆಯನ್ನು ಮಾಡಿದ್ದಾರೆ. ಇಂತಹ ದಬ್ಬಾಳಿಕೆಯನ್ನು ಕೃಷಿಕರು ಸಹಿಸುವುದಿಲ್ಲ. ಇಂತಹ ಕಾನೂನು ಬಾಹಿರ ದಬ್ಬಾಳಿಕೆಯನ್ನು ಪುನರಾವರ್ತನೆ ಮಾಡಿದಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಕೃಷಿಕರನ್ನು ಸೇರಿಸಿ ಮೂಡುಬಿದಿರೆಯಿಂದ ನಿಡ್ಡೋಡಿಯವರೆಗೆ ಕಾಲ್ನಡಿಗೆ ಜಾಥದ ಮೂಲಕ ಬಂದು ಉಗ್ರಹೋರಾಟ ಮಾಡುತ್ತೇವೆ. ಇಂದು ನಾವು ಶಾಂತಿಯುತ ಪ್ರತಿಭಟನೆಯ ಮೂಲಕ ಸಂಬAಧಪಟ್ಟವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದೆ ರೈತರಿಗೆ ಅನ್ಯಾಯವಾದರೆ ರೈತರ ಕ್ರಾಂತಿಯೇ ಇಲ್ಲಿ ಆಗಬಹುದು ಎಂದು ಎಚ್ಚರಿಕೆ ನೀಡಿದರು.
ಕಲ್ಲಮುಂಡ್ಕೂರು ಗ್ರಾಪಂ ಅಧ್ಯಕ್ಷ ಪ್ರೇಮಾ ಶೆಟ್ಟಿ, ಸದಸ್ಯರಾದ ಸುಖಾನಂದ ಶೆಟ್ಟಿ, ಜೆಸಿಂತಾ ಡಿಸೋಜ, ಕಿಸಾನ್ ಸಂಘದ ಕಾರ್ಯಕರ್ತರಾದ ಅಲ್ಫೋನ್ಸ್ ಲೋಬೋ, ಜಾನ್ ರೆಬೆಲ್ಲೊ, ಗಂಗಾಧರ ಶೆಟ್ಟಿ, ಅಬ್ರೋಜ್ ರೆಬೆಲ್ಲೊ, ಸದಾನಂದ ಪೂಜಾರಿ, ಜೀವನ್ ಕ್ರಾಸ್ತ ಸಹಿತ ನೂರಕ್ಕೂ ಅಧಿಕ ರೈತರು ಭಾಗವಹಿಸಿದರು.