
ರಾಷ್ಟ್ರಪತಿಯಿಂದ ರಾಣಿ-ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ
ಮೂಡುಬಿದಿರೆ: 54 ವರ್ಷಗಳ ಸುದೀರ್ಘಕಾಲ ರಾಜ್ಯಭಾರ ನಡೆಸಿದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪ್ರಕಟಸಿದ ವಿಶೇಷ ಅಂಚೆ ಚೀಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ನಾಡಿನ ರಕ್ಷಣೆಗಾಗಿ ರಾಣಿ ಚೆನ್ನಭೈರಾದೇವಿ ನಡೆಸಿದ ಹೋರಾಟ, ಸಾಮಾಜಿಕ ಕಾಳಜಿ, ಜಾತ್ಯತೀತ ಮನೋಭಾವ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಆಕೆ ಕೈಕೊಂಡ ರಾಜನೀತಿ ಅವಿಸ್ಮರಣೀಯ. ಅಂಚೆಚೀಟಿ ಹೊರತಂದ ಭಾರತೀಯ ಅಂಚೆ ಇಲಾಖೆ ಹಾಗೂ ಪ್ರಾಯೋಜಕತ್ವ ಮಾಡಿದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯನ್ನು ಅಭಿನಂದಿಸಿದರು.
ರಾಜ್ಯಸಭಾ ಸದಸ್ಯ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ರಾಣಿ ಚೆನ್ನಭೈರಾದೇವಿ ಶೌರ್ಯ, ದೃಢ ನಿರ್ಧಾರ, ಉನ್ನತ ಆಡಳಿತ ಕೌಶಲ್ಯವನ್ನು ಹೊಂದಿದ್ದರು. ವಾಣಿಜ್ಯ ಮತ್ತು ನೌಕಾಯಾನದಲ್ಲಿ ದಿಟ್ಟ ಹೆಜ್ಜೆಯಿಟ್ಟ ಹೋರಾಟಗಾರ್ತಿ. ಪೋರ್ಚುಗೀಸ್ ಬಲಗಳ ವಿರುದ್ಧ ನಿರ್ಭೀತಿಯಾಗಿ ಪ್ರತಿರೋಧಿಸಿದ ರಾಷ್ಟ್ರೀಯ ಸ್ವಾಭಿಮಾನದ ಸಂಕೇತವಾಗಿದ್ದಾಳೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಅಂಚೆ ಚೀಟಿಯ ಪ್ರಾಯೋಜಕರಾದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ದೆಹಲಿಯ ಅಂಚೆ ಮಹಾನಿರ್ದೇಶಕ ಅಖಿಲೇಶ್ ಕುಮಾರ್ ಪಾಂಡಿ, ಹುಬ್ಬಳ್ಳಿಯ ಸಾಮಾಜಿಕ ಕರ‍್ಯಕರ್ತ ಮಹೇಂದ್ರ ಸಿಂಗ್, ಲೇಖಕ ಡಾ.ಗಜಾನನ ಶರ್ಮ, ಉದ್ಯಮಿ ಮಹಾವೀರ ಕುಂದೂರ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಪಿ ಸಂಪತ್ ಕುಮಾರ್ ಉಪಸ್ಥಿತರಿದ್ದರು.