
ಪುತ್ತೂರಿನಲ್ಲಿ ‘ಆತಂಕ’ ಸೃಷ್ಟಿಸಿದ ಬೆದರಿಕೆ ಕರೆ
ಪುತ್ತೂರು: ಮಗುವಿನ ಜನ್ಮಕ್ಕೆ ಕಾರಣವಾಗಿ ಇದೀಗ ಬಂಧನದಲ್ಲಿರುವ ಯುವಕ ಜೈಲಿನಿಂದ ಬಂದ ಮೇಲೆ ಮದುವೆಯಾಗದಿದ್ದರೆ ಗುಂಡಿಕ್ಕಿ ಕೊಲ್ಲುತ್ತೇವೆ ಎಂಬ ಬೆದರಿಕೆ ಹಾಕಿದ್ದಾರೆ ಎನ್ನುವ ಹಿನ್ನಲೆಯಲ್ಲಿ ಇದೀಗ ಪುತ್ತೂರಿನಲ್ಲಿ ಆತಂಕ ಸೃಷ್ಟಿಯಾಗಿದೆ. ಮಾದ್ಯಮವೊಂದರ ಪ್ರತಿನಿಧಿಗೆ ಕಲಿ ಯೋಗೀಶ್ ಹೆಸರಲ್ಲಿ ಬಂದಿರುವ ಈ ಬೆದರಿಕೆ ಕರೆ ಪುತ್ತೂರಿನ ಯುವಕ ಕೃಷ್ಣ ಜೆ. ರಾವ್‌ಗೆ ಸಂಬಂಧಪಟ್ಟಿರುವುದು ಈ ಆತಂಕಕ್ಕೆ ಕಾರಣವಾಗಿದೆ.
ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನಾದ ಕೃಷ್ಣ ಜೆ. ರಾವ್ ಅವನಿಗೆ ಬಡಕುಟುಂಬದ ಸಂತ್ರಸ್ತೆ ಹುಡುಗಿ ಜತೆಗೆ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ನಿಂತು ಮದುವೆ ಮಾಡಿಸಬೇಕು. ಇಲ್ಲವಾದರೆ ಆತನನ್ನು ಗುಂಡಿಕ್ಕಿ ಕೊಲ್ಲಲಾಗುವುದು ಎಂದು ಭೂಗತಪಾತಕಿಯಾಗಿರುವ ಕಲಿ ಯೋಗೀಶ್ ಹೆಸರಲ್ಲಿ ಈ ಬೆದರಿಕೆ ಕರೆ ಬಂದಿರುವುದು ಪುತ್ತೂರಿನ ಘಟನೆಯಲ್ಲಿ ಹೊಸ ಆಯಾಮವನ್ನೇ ಉಂಟು ಮಾಡಿದೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಶೋಷಣೆಗೆ ಒಳಪಡಿಸಿ ಕೈಕೊಟ್ಟಿರುವ ಆರೋಪಿ ಕೃಷ್ಣ ಜೆ. ರಾವ್ ತನ್ನ ತಂದೆ ಪಿ.ಜಿ. ಜಗನ್ನೀವಾಸ ರಾವ್ ಸಾಕ್ಷ್ಯದಲ್ಲಿಯೇ ಮೊದಲ ಹಂತದಲ್ಲಿ ಹುಡುಗಿಯನ್ನು ಮದುವೆ ಮಾಡಿಕೊಳ್ಳುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದ. ಈತನ ತಂದೆಯೂ ಮದುವೆ ಮಾಡಿಸುವುದಾಗಿ ಬರೆದುಕೊಟ್ಟಿದ್ದರು. ಆದರೆ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ ಬಳಿಕವೂ ಮದುವೆಗೆ ಮುಂದಾಗದ ಯುವಕ ಕುಟುಂಬದ ವಿರುದ್ಧ ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯ ಮೆಟ್ಟಲು ಹತ್ತಿದ್ದರು. ದೂರು ದಾಖಲಾಗುತ್ತಿದ್ದಂತೆ ಕೃಷ್ಣ ಜೆ ರಾವ್ ನಾಪತ್ತೆಯಾಗಿದ್ದ. 10 ದಿನಗಳ ಬಳಿಕ ಪೊಲೀಸರಿಗೆ ಮೈಸೂರಿನ ಟಿ. ನರಸೀಪುರದಲ್ಲಿ ಸಿಕ್ಕಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಹಂತದಲ್ಲಿ ನಾನು ಜೈಲಿಗೆ ಹೋದರೂ ಸರಿ ಆಕೆಯನ್ನು ಮದುವೆಯಾಗುವುದಿಲ್ಲ. ಜೈಲಿನಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಮಾದ್ಯಮಗಳಿಗೆ ತಿಳಿಸಿದ್ದರು. ಆದರೆ ಇದೀಗ ಈ ಪ್ರಕರಣದ ಬಗ್ಗೆ ನನಗೆ ದೂರು ಬಂದಿದೆ. ಆತ ಮದುವೆಯಾಗದಿದ್ದರೆ ಗುಂಡು ಹೊಡೆಯುತ್ತೇವೆ. ಅಪ್ಪ ಜೀವ ಇದ್ದು ಅಪ್ಪ ಇಲ್ಲ ಎಂದು ಹೇಳುವುದಕ್ಕಿಂತ ಅಪ್ಪ ಸತ್ತು ಹೋಗಿದ್ದಾನೆ ಎಂದು ಹೇಳುವುದು ಸರಿಯಾಗುತ್ತದೆ ಎಂದು ಕಲಿ ಯೋಗೀಶ್ ಹೆಸರಲ್ಲಿ ಬಂದಿರುವ ಕರೆ ಯುವಕನ ಕುಟುಂಬಕ್ಕೆ ಮಾತ್ರವಲ್ಲ ಪುತ್ತೂರಿನಲ್ಲಿಯೇ ಭಯಮಿಶ್ರಿತ ವಾತಾವರಣವನ್ನು ಸೃಷ್ಟಿಸಿದೆ.
ಕಲಿ ಯೋಗೀಶ್ ಮತ್ತು ಪುತ್ತೂರು..:
2015ರಲ್ಲಿ ಪುತ್ತೂರಿನ ಸಿಪಿಸಿ ಕಾಂಪ್ಲೆಕ್ಸ್‌ನಲ್ಲಿದ್ದ ಫ್ಲಾಜಾದಲ್ಲಿದ್ದ ರಾಜಧಾನಿ ಜುವೆಲ್ಲರ‍್ಸ್‌ನಲ್ಲಿ ಶೂಟೌಟ್ ಪ್ರಕರಣ ಹಾಗೂ 2024ರಲ್ಲಿ ಉದ್ಯಮಿಯೊಬ್ಬರಿಗೆ ಬೆದರಿಕೆ ಒಡ್ಡಿದ ಎರಡು ಘಟನೆಗಳಲ್ಲಿ ಪುತ್ತೂರು ನಗರಠಾಣೆಯಲ್ಲಿ ಕಲಿ ಯೋಗೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.