
ಕೃಷ್ಣ ಜೆ. ರಾವ್ ಗೆ ಜಾಮೀನು ನಿರಾಕರಣೆ
ಪುತ್ತೂರು: ಅವಿವಾಹಿತ ಯುವತಿಗೆ ಮಗುಭಾಗ್ಯ ನೀಡಿದ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡುವುದನ್ನು ತಿರಸ್ಕರಿಸಿದೆ.
ತನ್ನ ಬಾಲ್ಯದ ಗೆಳತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಗರ್ಭವತಿಯನ್ನಾಗಿಸಿ ವಂಚಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ವಾದಿ ಮತ್ತು ಪ್ರತಿವಾದಿಗಳ ವಾದವನ್ನು ಆಲಿಸಿದ ಬಳಿಕ ಶುಕ್ರವಾರ ತನ್ನ ತೀರ್ಪನ್ನು ಪ್ರಕಟಿಸಿದೆ. ಜಾಮೀನು ಅರ್ಜಿಯನ್ನು ನಿರಾಕರಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.
ಕೃಷ್ಣ ಜೆ.ರಾವ್ ತನ್ನ ಗೆಳತಿಗೆ ವಂಚಿಸಿದ ಪ್ರಕರಣ ಇದಾಗಿದ್ದು, ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ಮದುವೆಗೆ ನಿರಾಕರಿಸಿದ ಹಿನ್ನಲೆಯಲ್ಲಿ ಸಂತ್ರಸ್ತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಆತನ ವಿರುದ್ಧ ಅತ್ಯಾಚಾರ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿತ್ತು. ಈ ಹಂತದಲ್ಲಿ ತಲೆ ಮರೆಸಿಕೊಂಡ ಆರೋಪಿಯನ್ನು ಪೊಲೀಸರು 10 ದಿನಗಳ ಬಳಿಕ ಮೈಸೂರಿನ ಟಿ.ನರಸೀಪುರದಲ್ಲಿ ಬಂಧಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿ ಜಾಮೀನು ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ನ್ಯಾಯಾಲಯ ಆರೋಪಿ ಪರ ಹಾಗೂ ಸಂತ್ರಸ್ತೆ ಪರ ವಕೀಲರ ವಾದವನ್ನು ಜು.19ರಂದು ಆಲಿಸಿದ್ದು, ಅಂತಿಮ ತೀರ್ಪನ್ನು ಜು.25ಕ್ಕೆ ನಿಗದಿಗೊಳಿಸಿತ್ತು. ಇಂದು ನ್ಯಾಯಾಲಯ ತನ್ನ ಅಂತಿಮ ತೀರ್ಪಿನಲ್ಲಿ ಜಾಮೀನು ಆರ್ಜಿಯನ್ನು ವಜಾಗೊಳಿಸಿ ಜಾಮೀನು ನಿರಾಕರಿಸಿದೆ.