
ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಚಾಲಕನ ಮೃತದೇಹ ಪತ್ತೆ
ಸುಬ್ರಹ್ಮಣ್ಯ: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಚಾಲಕನ ಮೃತದೇಹ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ.
ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆಯ ಹೊನ್ನಪ್ಪ (52) ಮೃತರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಹೊನ್ನಪ್ಪ ಅವರು ಮಂಗಳವಾರ ಆಸ್ಪತ್ರೆಗೆಂದು ಮನೆಯಲ್ಲಿ ಹೊರಟು, ಆಸ್ಪತ್ರೆಗೆ ತೆರಳಿ ಅಲ್ಲಿಂದ ನಾಪತ್ತೆಯಾಗಿದ್ದರು. ಹೊನ್ನಪ್ಪ ಅವರು ಅಗ್ರಹಾರದ ಬಳಿಯಿಂದ ಕುಮಾರಧಾರ ನದಿ ಕಡೆಗೆ ಓಡುತ್ತಿರುವ ದೃಶ್ಯ ಸಿಸಿಕೆಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನಲೆಯಲ್ಲಿ ಅವರು ಕುಮಾರಧಾರ ನದಿಗೆ ಹಾರಿರುವ ಶಂಕೆ ಹಿನ್ನಲೆಯಲ್ಲಿ ಅಂದು ರಾತ್ರಿಯಿಂದಲೇ ಹುಡುಕಾಟ ಆರಂಭಿಸಲಾಗಿತ್ತು. ಹಾಗೂ ಸುಬ್ರಹ್ಮಣ್ಯ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಬುಧವಾರ ಬೆಳಗ್ಗೆಯಿಂದ ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ, ರವಿಕಕ್ಕೆಪದವು ತಂಡ, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ, ಸುಳ್ಯ ಆಂಬ್ಯುಲೆನ್ಸ್ ಚಾಲಕ ತಂಡ, ಸ್ಥಳೀಯರ ತಂಡ ನಾಪತ್ತೆಯಾಗಿದ್ದ ವ್ಯಕ್ತಿಗಾಗಿ ಕುಮಾರಧಾರ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದರು. ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಶುಕ್ರವಾರ ಬೆಳಗ್ಗೆ ಹೊನ್ನಪ್ಪ ಅವರ ಮೃತದೇಹ ಸುಬ್ರಹ್ಮಣ್ಯ ಸ್ನಾನಘಟ್ಟದಿಂದ ಸುಮಾರು 2 ಕಿ.ಮೀ. ಕೆಳಭಾಗದಲ್ಲಿ ಪೊದೆಗಳ ನಡುವೆ ಪತ್ತೆಯಾಗಿದೆ. ಅಲ್ಲಿಂದ ಮೃತದೇಹವನ್ನು ಹೊರತೆಗೆದು ಮನೆಯವರಿಗೆ ಹಸ್ತಾಂತರಿಸಲಾಗಿದ್ದು, ಆಸ್ಪತ್ರೆಯಲ್ಲಿ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆ, ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಮತ್ತಿತರರು ಕಾರ್ಯಾಚರಣೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ.